ಕಾಸರಗೋಡಿನಲ್ಲಿ ಎನ್‌ಐಎ ದಾಳಿ: ತಲೆಮರೆಸಿಕೊಂಡಿದ್ದ ಉಗ್ರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಯೋತ್ಪಾದನಾ ಕೃತ್ಯವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು ಕಾಸರಗೋಡು ಜಿಲ್ಲೆಯ ಕಾಞಂಗಾಡು ಸಮೀಪದ ನೀಲೇಶ್ವರ ಪಡನ್ನಕ್ಕಾಡ್ ಎಂಬಲ್ಲಿ ರಹಸ್ಯ ಕೇಂದ್ರವೊಂದರಲ್ಲಿ ವಾಸಿಸುತ್ತಿದ್ದ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಮುಂಜಾನೆ ನಡೆಸಿದ ಅತೀ ರಹಸ್ಯ ಹಾಗೂ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದೆ.

ಪಶ್ಚಿಮ ಬಂಗಾಳ ನಿವಾಸಿ ಎಂ.ಬಿ.ಶಾಬ್‌ಶೇಖ್ (೩೪) ಎಂಬಾತ ಬಂತ ಆರೋಪಿಯೆಂದು ತಿಳಿದುಬಂದಿದೆ. ಈತ ಬಾಂಗ್ಲಾದೇಶದ ಪ್ರಜೆಯಾಗಿರುವ ಶಂಕೆಯನ್ನು ತನಿಖಾ ತಂಡವು ವ್ಯಕ್ತಪಡಿಸಿದ್ದು , ಈ ಬಗ್ಗೆ ಸಮಗ್ರ ತನಿಖೆ ಮುಂದುವರಿಸಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದು ನಂತರ ತಾವು ಪಶ್ಚಿಮ ಬಂಗಾಳದವರೆಂದು ತಿಳಿಸಿ ಅದೆಷ್ಟೋ ಮಂದಿ ಭಾರತದ ವಿವಿಧ ರಾಜ್ಯಗಳಲ್ಲಾಗಿ ಅನಕೃತವಾಗಿ ವಾಸಿಸುತ್ತಿರುವ ಬಗ್ಗೆ ಎನ್‌ಐಎಗೆ ಸ್ಪಷ್ಟ ಮಾಹಿತಿ ಲಭಿಸಿದೆ.

ಇದೀಗ ಬಂಧಿತನಾದ ಆರೋಪಿ ಶಾಬ್‌ಶೇಖ್ ಕೂಡಾ ಬಾಂಗ್ಲಾದೇಶದವನಾಗಿರಬಹುದೆಂಬ ಸಂಶಯ ವ್ಯಕ್ತಗೊಂಡಿದ್ದು, ಈ ನಿಟ್ಟಿನಲ್ಲಿ ಆತನನ್ನು ಸಮಗ್ರ ವಿಚಾರಣೆಗೊಳಪಡಿಸಲಾಗಿದೆ. ಬಂಧಿತ ಆರೋಪಿಯು ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಅತನ ವಿರುದ್ಧ ಯುಎಪಿಎ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಅದನ್ನು ತಿಳಿದು ಆತ ಅಸ್ಸಾಂನಿಂದ ತಪ್ಪಿಸಿಕೊಂಡು ಕೇರಳದ ಗುಪ್ತ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡಿರುವ ಕುರಿತು ತನಿಖಾ ತಂಡಕ್ಕೆ ಮಾಹಿತಿ ದೊರಕಿತ್ತು.

ತನಿಖಾ ಸಂಸ್ಥೆಯಿಂದ ಲುಕ್‌ಔಟ್ ನೋಟೀಸ್
ಆರೋಪಿ ಎಂ.ಬಿ.ಶಾಬ್‌ಶೇಖ್‌ನನ್ನು ಪತ್ತೆಹಚ್ಚಲು ಅಸ್ಸಾಂ ಪೊಲೀಸರು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಸಂಸ್ಥೆ ಕೂಡಾ ಪ್ರತ್ಯೇಕವಾಗಿ ಲುಕ್‌ಔಟ್ ನೋಟೀಸ್ ಜಾರಿಗೊಳಿಸಿತ್ತು. ಅದರಂತೆ ತಿಂಗಳುಗಳ ಕಾಲ ನಡೆಸಲಾದ ತನಿಖೆಯಲ್ಲಿ ಆತ ಕಾಞಂಗಾಡು ಸಮೀಪದ ಪಡನ್ನಕಾಡ್‌ನ ರಹಸ್ಯ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ಎನ್‌ಐಎ ವಿಶೇಷ ತಂಡವು ಪಡನ್ನಕ್ಕಾಡ್‌ಗೆ ಆಗಮಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!