ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ಮತ್ತು ಐಪಿಎಲ್ ನಡುವೆಯೂ ಟೆಸ್ಟ್ ಕ್ರಿಕೆಟ್ನ ಭವಿಷ್ಯವನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಮಾಸ್ಟರ್ಪ್ಲ್ಯಾನ್ ರೂಪಿಸಿದೆ.
ದೀರ್ಘ ಮಾದರಿಯ ಕ್ರಿಕೆಟ್ಗೆ ಮುಂದಿನ ಪೀಳಿಗೆಯ ಆಟಗಾರರನ್ನು ಸಿದ್ಧಗೊಳಿಸುವ ಉದ್ದೇಶದಿಂದ, ಯುವ ಪ್ರತಿಭೆಗಳಿಗಾಗಿ ವಿಶೇಷ ರೆಡ್ ಬಾಲ್ ಯೋಜನೆಗೆ ಚಾಲನೆ ನೀಡಲು ಮಂಡಳಿ ಸಜ್ಜಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ಹಾಗೂ ಟೆಸ್ಟ್ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರಿಗೆ ಒಪ್ಪಿಸಲಾಗಿದೆ.
ಈ ಯೋಜನೆಯಡಿ ಭಾರತ ಅಂಡರ್-19 ಮತ್ತು ಅಂಡರ್-25 ತಂಡಗಳು ಶೀಘ್ರದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಕೇವಲ ರೆಡ್ ಬಾಲ್ ಪಂದ್ಯಗಳನ್ನೇ ಆಡಲಿವೆ. ಯುವ ಆಟಗಾರರಲ್ಲಿ ಟೆಸ್ಟ್ ಕ್ರಿಕೆಟ್ಗೆ ಅಗತ್ಯವಾದ ತಾಳ್ಮೆ, ತಂತ್ರ ಮತ್ತು ದೀರ್ಘ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯ ಬೆಳೆಸುವುದು ಇದರ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ:
ಇದಕ್ಕೆ ಜೊತೆಯಾಗಿ, 2026ರ ಐಪಿಎಲ್ ಬಳಿಕ ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಲ್ಕು ದಿನಗಳ ವಿಶೇಷ ರೆಡ್ ಬಾಲ್ ಟೂರ್ನಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಸುಮಾರು 64 ಯುವ ಪ್ರತಿಭೆಗಳು ಇದರಲ್ಲಿ ಅವಕಾಶ ಪಡೆಯಲಿದ್ದು, ರಣಜಿ ಮತ್ತು ಸಿ.ಕೆ. ನಾಯುಡು ಟ್ರೋಫಿಯಲ್ಲಿ ಮಿಂಚಿದ ಆಟಗಾರರಿಗೆ ಮೊದಲ ಆದ್ಯತೆ ಸಿಗಲಿದೆ.
ಮಾಜಿ ದಿಗ್ಗಜರಾದ ಝಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಮಾರ್ಗದರ್ಶನದಲ್ಲಿ ವಿಶೇಷ ಶಿಬಿರಗಳನ್ನೂ ಆಯೋಜಿಸುವ ಮೂಲಕ, ಮುಂದಿನ ದಶಕಕ್ಕೆ ಬಲಿಷ್ಠ ಟೀಮ್ ಇಂಡಿಯಾ ಟೆಸ್ಟ್ ತಂಡ ಕಟ್ಟುವ ಗುರಿಯನ್ನು ಬಿಸಿಸಿಐ ಇಟ್ಟುಕೊಂಡಿದೆ. ಒಟ್ಟಿನಲ್ಲಿ, ಟೆಸ್ಟ್ ಕ್ರಿಕೆಟ್ಗೆ ಹೊಸ ಜೀವ ತುಂಬುವ ದೊಡ್ಡ ಹೆಜ್ಜೆಯಾಗಿದೆ ಈ ಯೋಜನೆ.



