ಹೊಸದಿಗಂತ ಡಿಜಿಟಲ್ ಡೆಸ್ಕ್
1892 ರ ಏಪ್ರಿಲ್ 11ರಂದು ಮುಂಬೈನಲ್ಲಿ ಜನಿಸಿದ ಮಿಥುಬಾಹೆನ್ ಹಾರ್ಮುಸ್ಜಿ ಪೆಟಿಟ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಹೆಸರು ಗಳಿಸಿದವರು. ಅವರು 1919 ರಲ್ಲಿ ರೌಲಟ್ ಕಾಯಿದೆಯನ್ನು ಪ್ರತಿಭಟಿಸಿ ಗಾಂಧಿಯವರು ಪ್ರಾರಂಭಿಸಿದ ಚಳುವಳಿಗೆ ಸೇರಿದರು.
ಆ ಬಳಿಕ ಸರೋಜಿನಿ ನಾಯ್ಡು ಅವರು ಸ್ಥಾಪಿಸಿದ ʼಅಖಿಲ ಭಾರತ ಮಹಿಳಾ ಸಮ್ಮೇಳನದ ಖಾದಿ ಇಲಾಖೆಯʼ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅವರು 1929 ರಲ್ಲಿ ಬೋರ್ಸಾಡ್ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
1927 ರಲ್ಲಿ ಗುಜರಾತ್‌ನ ಪ್ರವಾಹದ ಸಮಯದಲ್ಲಿ ರತನ್‌ಬಹೆನ್ ಮೆಹ್ತಾ ಮತ್ತು ಭಕ್ತಿಬಾ ದೇಸಾಯಿ ಅವರೊಂದಿಗೆ ಸೇರಿ ತುರ್ತಾಗಿ ಪರಿಹಾರ ಕಾರ್ಯಗಳನ್ನು ನಡೆಸುವ ಮೂಲಕ ಮಿಥುಬಾಹೆನ್ ಜನರಿಗೆ ನೆರವಾದರು. 1928 ರಲ್ಲಿ ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಳ್ಳಿಯಿಂದ ಹಳ್ಳಿಗೆ ತಿರುಗಾಡಿದರು.
1930 ರಲ್ಲಿ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಕಸ್ತೂರಬಾ ಅವರೊಂದಿಗೆ ಉಳಿದುಕೊಂಡಿದ್ದರು, ಕಸ್ತೂರ್ಬಾ ಬಂಧನದ ಬಳಿಕ ಸತ್ಯಾಗ್ರಹ ಶಿಬಿರಗಳನ್ನು ನಿರ್ವಹಿಸಿದರು. ನಾಗರಿಕ ಅಸಹಕಾರ ಚಳವಳಿಯ ಸಂದರ್ಭದಲ್ಲಿ, ಗಾಂಧೀಜಿಯಿಂದ ಪ್ರೇರಿತರಾದ ಮಿಥುಬಾಹೆನ್ ನೇತೃತ್ವದಲ್ಲಿ ಸೂರತ್ ಜಿಲ್ಲೆಯ ಸುಮಾರು 1,500 ಮಹಿಳೆಯರು ವೈನ್ ಶಾಪ್‌ಗಳು ಮತ್ತು ವಿದೇಶಿ ಬಟ್ಟೆಗಳ ಅಂಗಡಿಗಳಲ್ಲಿ ಪಿಕೆಟಿಂಗ್ ನಡೆಸಿದರು.
ಅವರು 1930ರಲ್ಲಿ ಮರೋಳಿ ಪ್ರದೇಶದಲ್ಲಿ ಕಸ್ತೂರಬಾ ನೇಯ್ಗೆ ಶಾಲೆಯನ್ನು ಮತ್ತು 1931 ರಲ್ಲಿ ಕಸ್ತೂರಬಾ ಸೇವಾಶ್ರಮವನ್ನು ಸ್ಥಾಪಿಸಿದರು. ಅಸಹಕಾರ ಚಳವಳಿಯ ಸಮಯದಲ್ಲಿ ಅವರು ನಾಲ್ಕು ತಿಂಗಳ ಕಾಲ ಜೈಲುವಾಸವನ್ನು ಅನುಭವಿಸಿದರು. ಅವರು ಜುಲೈ 16 1973 ರಲ್ಲಿ ಸೂರತ್‌ನಲ್ಲಿ ನಿಧನರಾದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ