ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದಲಾಗಿ ತಮಿಳುನಾಡು ರಾಜ್ಯ ಸರ್ಕಾರ ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ಇಂದು ಬಿಡುಗಡೆ ಮಾಡಿದೆ .
ಕೊಟ್ಟೂರುಪುರಂನ ಅನ್ನಾ ಸೆಂಟಿನಾರಿ ಲೈಬ್ರರಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಸಿಎಂ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದರು.
ರಾಜ್ಯ ಶಿಕ್ಷಣ ನೀತಿಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿದೆ. ಈ ಮೂಲಕ ತಮಿಳುನಾಡು ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸಲ್ಲ, ಅದನ್ನು ಅಳವಡಿಸಿಕೊಳ್ಳಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.
ರಾಜ್ಯ ಶಿಕ್ಷಣ ನೀತಿಯಲ್ಲಿ 2 ಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ತಮಿಳು ಮತ್ತು ಇಂಗ್ಲೀಷ್ ಭಾಷಾ ನೀತಿಯನ್ನು ತಮಿಳು ನಾಡು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಲಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಸ್ನಾತಕ ಪದವಿ ಕೋರ್ಸ್ ಗಳಿಗೆ 11 ಮತ್ತು 12ನೇ ತರಗತಿಯ ಒಟ್ಟಾರೆ ಅಂಕಗಳನ್ನು ಪರಿಗಣಿಸುವಂತೆ ರಾಜ್ಯ ಶಿಕ್ಷಣ ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಸ್ನಾತಕ ಪದವಿ ಕೋರ್ಸ್ ಗಳಿಗೆ ವಿಶೇಷವಾಗಿ ಆರ್ಟ್ಸ್ , ಸೈನ್ಸ್ ಪದವಿ ಕೋರ್ಸ್ ಗಳಲ್ಲಿ ಕಾಮನ್ ಎಂಟ್ರೆನ್ಸ್ ಪರೀಕ್ಷೆ ಇರಲ್ಲ.
ತಮಿಳುನಾಡು ರಾಜ್ಯ ಸರ್ಕಾರವು 2022 ರಲ್ಲಿ ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು 14 ಮಂದಿ ಸಮಿತಿ ರಚಿಸಿತ್ತು. ಕಳೆದ ವರ್ಷದ ಜುಲೈನಲ್ಲಿ ಸಮಿತಿಯು ಸಿಎಂ ಎಂ.ಕೆ.ಸ್ಟಾಲಿನ್ ಗೆ ತನ್ನ ವರದಿ ನೀಡಿತ್ತು. ಈ ವರದಿಯನ್ನು ಇಂದು ಸಿಎಂ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ್ದಾರೆ.
ಇನ್ನೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3,5, 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಪ್ರಸ್ತಾಪಿಸಲಾಗಿತ್ತು. ಅದನ್ನು ತಮಿಳುನಾಡು ರಾಜ್ಯ ಶಿಕ್ಷಣ ನೀತಿಯೂ ತಿರಸ್ಕರಿಸಿದೆ. 3 ಮತ್ತು 5, 8 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಸಾಮಾಜಿಕ ನ್ಯಾಯದ ವಿರೋಧಿ. ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಾರಣವಾಗುತ್ತೆ ಎಂದು ತಮಿಳುನಾಡು ರಾಜ್ಯ ಶಿಕ್ಷಣ ನೀತಿ ಹೇಳಿದೆ.