ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ SIT ವಿಚಾರಣೆಗೆ ಹಾಜರಾಗಿದ್ದು, ಹೈ ಡ್ರಾಮಾ ಮಾಡಿದ್ದಾರೆ.
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ವಶಕ್ಕೆ ಪಡೆದ ಬೆನ್ನಲ್ಲೇ ದದ್ದಲ್‌ಗಾಗಿ ಹುಡುಕಾಟ ನಡೆಸುತ್ತಿತ್ತು. ಆದರೆ, ಎಲ್ಲೂ ಕಾಣಿಸಿಕೊಂಡಿರದಿದ್ದದದ್ದಲ್ ಇದೀಗ ಎಸ್ಐಟಿ ಕಚೇರಿ ಬಳಿ ಪ್ರತ್ಯಕ್ಷವಾಗಿದ್ದಾರೆ. ಇಡಿ ವಶಕ್ಕೆ ಪಡೆದರೆ ಸಂಕಷ್ಟ ಎದುರಾಗಬಹುದು ಎಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ದದ್ದಲ್ ಹಾಜರಾಗಿದ್ದಾರೆ. ಇದಕ್ಕೂ ಮೊದಲು ಯಲಹಂಕ ಬಳಿ ಇರುವ ದದ್ದಲ್ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಅವರು ಮನೆಯಲ್ಲಿರದ ಕಾರಣ ಇಡಿ ಅಧಿಕಾರಿಗಳು ವಾಪಸ್ ಆಗಿದ್ದರು. ನಂತರ ವಿಧಾನಸೌಧ ಹಾಗೂ ಶಾಸಕರ ಭವನದಲ್ಲಿ ಕೂಡ ಅವರಿಗಾಗಿ ಇಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಈ ವೇಳೆ ಎಲ್ಲೂ ಕಾಣಿಸಿಕೊಳ್ಳದಿದ್ದ ದದ್ದಲ್ ಅವರು ನೇರವಾಗಿ ಎಸ್‌ಐಟಿ ಕಚೇರಿಗೆ ತೆರಳಿದ್ದಾರೆ.
ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಬಸನಗೌಡ ದದ್ದಲ್ ಮೆಗಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರದವರೆಗೂ ಇಡಿಯಿಂದ ತಪ್ಪಿಸಿಕೊಂಡರೆ ನಂತರ ಅರೆಸ್ಟ್ ಸುಲಭವಿಲ್ಲ. ಸೋಮವಾರದಿಂದ ಹದಿನೈದು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಯುವಾಗ ಸ್ಪೀಕರ್ ಅನುಮತಿ ಇಲ್ಲದೇ ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ದದ್ದಲ್ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.
ಬಂದನ ಮಾಡಬೇಕಾದರೆ ಸ್ಪೀಕರ್ ಅನುಮತಿ ಪಡೆದು ಪ್ರಕರಣದಲ್ಲಿ ಆರೋಪಿ ಬಂಧನ ಮೇಲ್ನೋಟಕ್ಕೆ ಅಗತ್ಯವಿದೆ ಎಂದು ಮನವರಿಕೆ ಮಾಡಬೇಕು. ಇಡಿ ಅಧಿಕಾರಿಗಳ ಮನವಿಯನ್ನು ಸ್ಪೀಕರ್ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಒಪ್ಪಿದ್ರೆ ಬಂಧಿಸಬಹುದು, ತಿರಸ್ಕರಿಸಿದರೆ ಬಂಧನ ಅಷ್ಟು ಸಲುಭವಲ್ಲ. ಹೀಗಾಗಿ ಇಂದು ಎಸ್ಐಟಿ ಮುಂದೆ ಹಾಜರಾಗಿದ್ದಾರೆ.