ಹೊಸದಿಗಂತ ವರದಿ ತುಮಕೂರು:
ತಾಕತ್ತಿದ್ದರೆ ಕುಮಾರಸ್ವಾಮಿ ಗುಬ್ಬಿಯಲ್ಲಿ ತಮ್ಮ ವಿರುದ್ದ ಸ್ಪರ್ಧಿಸಿ ಗೆಲ್ಲಲಿ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸವಾಲೆಸೆದಿದ್ದಾರೆ. ಇಂದು ಬೆಳಿಗ್ಗೆ ಜೆಡಿಎಸ್ ಬೆಂಬಲಿಗರು ತುಮಕೂರಿನ ಶ್ರೀನಿವಾಸ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ʻಕುಮಾರಸ್ವಾಮಿ ಒಬ್ಬ ನಾಯಕನೇ..? ಗಂಟೆಗೊಂದು, ಗಳಿಗೆಗೊಂದು ಮಾತನಾಡುತ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ನಾನು ರಾಜ್ಯ ಸಭಾಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಒಂದು ಬಾರಿ ಖಾಲಿ ಮತಪತ್ರ ಹಾಕಿದ್ದಾಗಿ ಆರೋಪಿಸುತ್ತಾನೆ, ಮತ್ತೊಮ್ಮೆ ಕಾಂಗ್ರೆಸ್‌ಗೆ ಮತ ಹಾಕಿದ್ದಾಗಿ ಹೇಳುತ್ತಾನೆ. ಅವನಿಗೆ ತಾನು ಏನು ಮಾತನಾಡುತ್ತಿದ್ದೇನೆ ಎಂಬ ಅರಿವೇ ಇಲ್ಲ. ಒಂದು ರೀತಿ ಮತಿಸ್ಥಿಮಿತ ತಪ್ಪಿದವನಂತೆ ಮಾತನಾಡುತ್ತಾನೆʼ ಎಂದರು.
ನಾನು ಇದುವರೆಗೆ ಆ ಅಪ್ಪ ಮಗನ ಹೆಸರು ಹೇಳಿಕೊಂಡು ಗೆದ್ದಿಲ್ಲ. ನನ್ನ ತಂದೆಯವರ ಹೆಸರು ಹೇಳಿಕೊಂಡು ಗೆದ್ದಿದ್ದೇನೆ. ನನ್ನ ಗೆಲುವಿಗೆ ನನ್ನ ತಂದೆಯವರ ಹೆಸರು ಮತ್ತು ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟಿರುವ ಪ್ರೀತಿಯೇ ಕಾರಣ. ಇಂತಹ ಸಂದರ್ಭದಲ್ಲಿ ನನ್ನ ರಾಜೀನಾಮೆ ಕೇಳಲು ಇವನ್ಯಾವ ಊರಿನ ದಾಸಯ್ಯ ಎಂದರು.