ಹೊಸದಿಗಂತ ವರದಿ ಸೋಮವಾರಪೇಟೆ:
ಒಂದು ಕೋಟಿ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಹಳ್ಳಿಗೆ ತೆರಳುವ ರಸ್ತೆ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ,ಲೋಕೋಪಯೋಗಿ ಇಲಾಖೆ ಮೂಲಕ ಒಂದು ಕೋಟಿ ಅನುದಾನ ಒದಗಿಸಲಾಗಿದೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಂಜನ್ ಕಾಂಕ್ರೀಟ್ ರಸ್ತೆ ದೀರ್ಘಕಾಲದವರೆಗೆ ಬಾಳಿಕೆ ಬರಬೇಕಾಗಿರುವುದರಿಂದ ಗುಣಮಟ್ಟದ ಕಾಮಗಾರಿ ನಡೆಸುವಂತೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಸತತ ಮೂರೂ ವರ್ಷಗಳ ಪ್ರಯತ್ನದ ನಂತರ ಪ್ರವಾಸೋದ್ಯಮ ಇಲಾಖೆ ಅನುದಾನ ಬಿಡುಗಡೆ ಮಾಡಿದೆ ಇದೀಗ ಟೆಂಡರ್ ಪ್ರಕ್ರಿಯೆಯು ಮುಗಿದಿದ್ದು ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.
ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶರಾದ ಶ್ರಿ. ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶರಾದ ಶ್ರಿ. ಮಹಾಂತಶಿವಲಿಂಗ ಸ್ವಾಮೀಜಿ,ಆಲೂರುಸಿದ್ದಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ನಿವೃತ್ತ ತಹಶೀಲ್ದಾರ್ ಗೋವಿಂದರಾಜು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲ ಅಭಿಯಂತರ ಮಹೇಂದ್ರ ಕುಮಾರ್,ಅಭಿಯಂತರ ವೆಂಕಟೇಶ್,ಗುತ್ತಿಗೆದಾರ ಪುರುಷೋತ್ತಮ್ ಹಾಗೂ ಮುಂತಾದವರು ಹಾಜರಿದ್ದರು.
ಈ ಸಂದರ್ಭ ಮೈಲಾತ್ಪುರ,ಮನೆಹಳ್ಳಿ,ನಿಡ್ತಾ ಕೊಪ್ಪಲು,ಹಾರೆಹೊಸೂರು ಮೂಲಕ ಶನಿವಾರಸಂತೆಗೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆ ಏರಿಸುವಂತೆ ಗ್ರಾ.ಪಂ.ಅಧ್ಯಕ್ಷ ಮೋಹನ್ ಹಾಗೂ ಗ್ರಾಮಸ್ತ ಬಸಪ್ಪ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕ ರಂಜನ್ ರವರಿಗೆ ಮನವಿ ಸಲ್ಲಿಸಿದರು.