ಹೊಸದಿಗಂತ ವರದಿ ಬೀದರ್:
ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 14 ರಂದು ಔರಾದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.
ತಾಲ್ಲೂಕಿನ ದುಢುಕನಾಳ, ವನಮಾರಪಳ್ಳಿ, ಬಾದಲಗಾಂವ, ನಾರಾಯಣಪುರ, ಮಮದಾಪೂರ, ಅಲ್ಲಾಪೂರ, ತೇಗಂಪೂರ, ಯನಗುಂದಾ, ಖಾಶೆಂಪೂರ, ಸುಂಧಾಳ, ಜಕನಾಳ, ನಂದ್ಯಾಳ, ಮಾನೂರ ಕೆ, ನಾಗಮಾರಪಳ್ಳಿ, ಕರಂಜಿ ಬಿ, ಕರಂಜಿ ಕೆ, ರಾಯಪಳ್ಳಿ, ನಾಗನಪಲ್ಲಿ, ಚಿಂತಾಕಿ, ಇಟಗ್ಯಾಳ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಮಹತ್ವವನ್ನು ವಿವರಿಸಿ, ಪ್ರತಿಯೊಬ್ಬ ಅರ್ಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ಸಾಧ್ಯವಾದಷ್ಟು ಬೇಗ ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ಮನವಿ ಮಾಡಿದರು.
ಕೆಲವೆಡೆ ಎಸ್‌ಐಆರ್ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೇ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲ್ಲ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಅರ್ಹರೆಲ್ಲರೂ ಅರ್ಜಿ ಸಲ್ಲಿಸುವಂತೆ ಕೆಲಸ ಮಾಡಬೇಕು.
ಇದನ್ನೂ ಓದಿ:
ತಹಸೀಲ್ದಾರರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು. ಗ್ರಾಮ ಮಟ್ಟದ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ಜನರಿಗೆ ಸರಿಯಾದ ಮಾಹಿತಿ ನೀಡಿ, ಅರ್ಜಿಗಳನ್ನು ಭರ್ತಿ ಮಾಡಲು ಜನತೆಗೆ ಸಹಾಯ ಮಾಡಬೇಕೆಂದು ನಿರ್ದೇಶನ ನೀಡಿದರು. ಸಾರ್ವಜನಿಕರು ದಾಖಲೆಗಳ ಕೊರತೆ ಅಥವಾ ಅರ್ಜಿ ಭರ್ತಿ ಕುರಿತು ಯಾವುದೇ ಗೊಂದಲಕ್ಕೆ ಒಳಗಾಗದೇ ಅಧಿಕಾರಿಗಳ ಸಹಾಯ ಪಡೆದು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಪ್ರವೀಣ ಕಾರಬಾರಿ, ಖಂಡೋಬಾ ಕಂಗಟೆ, ರಾಮ ರೆಡ್ಡಿ, ರವೀಂದ್ರ ರೆಡ್ಡಿ, ಜಗದೀಶ ಪಾಟೀಲ, ಶಿವಕಾಂತ ಮಜಗೆ, ಶರಣಪ್ಪ ಪಾಟೀಲ, ರಾವಸಾಬ ಪಾಟೀಲ, ನಾಗನಾಥ ಮೋರ್ಗೆ, ಸಂಜು ಮಾನಕಾರೆ, ಅನೀಲ ನಾರಾಯಣಪುರ, ಬಸರೆಡ್ಡಿ, ಕಾಶಿನಾಥ ಲಕ್ಕಾ, ರಮೇಶ ಪಾಟೀಲ ಸೇರಿದಂತೆ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.



