ದಿಗಂತ ವರದಿ ವಿಜಯಪುರ:
ಅಗ್ನಿಪಥ ವಿಷಯದಲ್ಲಿ ಸ್ವಲ್ಪ ಆತುರತೆ ಆಗಿದೆ ಎಂದು ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದರು. ಅಗ್ನಿಪಥ ವಿರುದ್ಧ ಯುವಕರ ಆಕ್ರೋಶ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ಕಳೆದ ಏಳೆಂಟು ವರ್ಷಗಳಿಂದ ಯುವಕರಿಗೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. 60 ಲಕ್ಷ ಉದ್ಯೋಗಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಎಂದು
ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಈ ರೀತಿಯ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದರೆ ಕಷ್ಟ ಎಂದರು.
ಅಗ್ನಿಪಥ ಉದ್ಯೋಗ ಭದ್ರತೆ ನೀಡಲ್ಲ. 20 ರಿಂದ 25 ವರ್ಷವಾದರೂ ಸರ್ಕಾರಿ ಸೇವೆ ಮಾಡಲು ಅವಕಾಶ ನೀಡಿದರೆ ಅನುಕೂಲ. ಉದ್ಯೋಗ ಭದ್ರತೆಯ ವಿಚಾರದಿಂದ ಅಗ್ನಿಪಥಗೆ ಯುವಕರು ವಿರೋಧ ಮಾಡುತ್ತಿದ್ದಾರೆ ಎಂದರು. ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಯಾವುದೇ ಸರ್ಕಾರವಿರಲಿ ಸಾಲ ಪಡೆದು ಸರ್ಕಾರ ನಡೆಸುವುದು ಸಾಧನೆಯಲ್ಲ. ರಾಜ್ಯ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿದೆ. ಕೇಂದ್ರ ಸರ್ಕಾರ ಕೂಡ 50 ರಿಂದ 60 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ಮುಂದಿನ ಭವಿಷ್ಯ ಕಗ್ಗತ್ತಿನಲ್ಲಿ ಸಾಗುತ್ತದೆ ಎಂದರು.