ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಸರ್ಕಾರ ಮೊಬೈಲ್ ಇಂಟರ್ನೆಟ್ ನಿರ್ಬಂಧವನ್ನು ನವೆಂಬರ್ 13ರ ವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಮೇ 3ರಿಂದ ಮಣಿಪುರದಲ್ಲಿ ಇಂಟರ್ನೆಟ್ ನಿರ್ಬಂಧ ಹೇರಲಾಗಿದೆ. ಆದರೆ ರಾಜ್ಯದ ಕೆಲವು ಭಾಗಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಬುಧವಾರ ಈ ಆದೇಶ ಹೊರಬಿದ್ದಿದೆ.
ಈ ನಡುವೆ ಶಸ್ತ್ರಾಸ್ತಧಾರಿಗಳ ಗುಂಪೊಂದು ಸಮುದಾಯಕ್ಕೆ ಸೇರಿದ ಇಬ್ಬರನ್ನು ಅಪಹರಣ ಮಾಡಿದೆ ಎಂದು ಹೇಳಿ ಪ್ರತಿಭಟನೆಯನ್ನು ನಡೆಸಿ ಹಿಂಸಾಚಾರಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುವ, ಸಾರ್ವಜನಿಕರನ್ನು ಪ್ರಚೋದಿಸುವ ಚಿತ್ರಗಳು, ದ್ವೇಷದ ಭಾಷಣಗಳು ಮತ್ತು ದ್ವೇಷದ ವಿಡಿಯೊ ಸಂದೇಶಗಳ ಪ್ರಸಾರಕ್ಕಾಗಿ ಸಮಾಜ ವಿರೋಧಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತಾರೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂಸಾಚಾರ ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ಸರ್ಕಾರ ಮರುಸ್ಥಾಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.