ಮೊಬೈಲ್ ಪ್ರೀಪೇಯ್ಡ್ ದರಗಳ ವಿರೋಧಿಸಿ ಟ್ವಿಟ್ಟರ್ ಸ್ಟ್ರಾಮ್ ಚಳವಳಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಖಾಸಗಿ ಟೆಲಿಕಾಂ ಕಂಪನಿಗಳು ಪ್ರೀಪೇಯ್ಡ್ ಇಂಟರ್ನೆಟ್ ಪ್ಯಾಕ್ ಮತ್ತು ಮೊಬೈಲ್ ರೀಚಾರ್ಜ್ ದರಗಳಲ್ಲಿ ಏರಿಸಿರುವ ಭಾರಿ ಹೆಚ್ಚಳದ ವಿರುದ್ಧ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಓ) ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಸಂಘಟನೆಗಳ ವತಿಯಿಂದ ರಾಷ್ಟ್ರವ್ಯಾಪಿ ಟ್ವಿಟ್ಟರ್ ಸ್ಟ್ರಾಮ್ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ದೇಶದಲ್ಲಿ ಕೋವಿಡ್-19ರ ಮೂರನೇ ಅಲೆಯು ಬಂದಿರುವ ಈ ಸಂದರ್ಭದಲ್ಲಿ ಇತರ ಯಾವುದೇ ಅಗತ್ಯ ವಸ್ತುಗಳಂತೆ ಮೊಬೈಲ್ ಫೋನ್ ಸಹ ಕನಿಷ್ಠ ಅವಶ್ಯಕತೆಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ, ಮೊಬೈಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ಸೇವೆಯ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಮೊಬೈಲ್ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಪ್ರತಿಯೊಂದು ಕ್ಷೇತ್ರದ ಡಿಜಿಟಲೀಕರಣವು ಮೊಬೈಲ್ ಫೋನ್‌ಗಳ ಬಳಕೆಯ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ಹೊರಹಾಕಲಾಯಿತು.
ಇಂತಹ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಒಂದೆಡೆ ಮೊದಲೇ ಕುಸಿದಿದ್ದ ದೇಶದ ಆರ್ಥಿಕ ಪರಿಸ್ಥಿತಿಯು ಕೋವಿಡ್‌ನಿಂದಾಗಿ ಮತ್ತಷ್ಟು ಬಿಗಡಾಯಿಸಿದೆ. ಇದರ ಪರಿಣಾಮದಿಂದಾಗಿ ದೇಶದ ಜನರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದು ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್ ಕಂಪನಿಗಳು ನೆಟ್ ಪ್ಯಾಕ್‌ಗಳು ಮತ್ತು ರೀಚಾರ್ಜ್ ದರಗಳನ್ನು ಶೇಕಡಾ 20-25 ರಷ್ಟು ಹೆಚ್ಚಿಸಿರುವುದು ಸರಿಯಲ್ಲ ಎಂದು ಟ್ವೀಟರ್‌ನಲ್ಲಿ ಆಕ್ಷೇಪಿಸಲಾಯಿತು.
ಈಗಾಗಲೇ ಮಧ್ಯಮ ವರ್ಗದ ಜನರು, ಕಡಿಮೆ ಆದಾಯವುಳ್ಳವರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ಎಲ್ಲರೊಂದಿಗೆ ಕನಿಷ್ಠ ಸಮಾಲೋಚನೆಯನ್ನೂ ನಡೆಸದೆ ಇದ್ದಕ್ಕಿದ್ದಂತೆ ದರಗಳನ್ನು ಹೆಚ್ಚಿಸಿದ್ದರು. ಖಾಸಗಿ ಟೆಲಿಕಾಂಗಳು ದರಗಳಲ್ಲಿ ಇಷ್ಟೊಂದು ಏರಿಕೆ ಮಾಡುತ್ತಿದ್ದರೂ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯಾವ ಕ್ರಮವನ್ನು ಕೈಗೊಳ್ಳದೇ ಜಡ ಮೌನವಾಗಿರುವುದು ಖಂಡನೀಯ ಎಂದು ಟ್ವೀಟರ್ ಚಳುವಳಿಕಾರರು ಕಿಡಿಕಾರಿದರು.
ಚಿತ್ರದುರ್ಗದಲ್ಲಿ ಎಐಡಿವೈಓ ವಿಜಯ್‌ಕುಮಾರ್, ವಿನಯ್, ನಿಂಗರಾಜು, ಎಐಡಿಎಸ್‌ಓದ ಜಿಲ್ಲಾದ ಕಾರ್ಯದರ್ಶಿ ಸಂಜಯ್, ಕುಮಾರ್, ನಾಗರಾಜ್, ಗೌಸ್‌ಫೀರ್ ಸೇರಿದಂತೆ ಎರಡೂ ಸಂಘಟನೆಗಳ ಜಿಲ್ಲಾ ಸಮತಿಯ ಸದಸ್ಯರೆಲ್ಲರೂ ಟ್ವೀಟ್ ಮಾಡಿದರು. ರಾಜ್ಯಾದ್ಯಂತ ೨೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಯುವಜನರು, ಜನಸಾಮಾನ್ಯರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮತ್ತು ರೀಟ್ವೀಟ್ ಮಾಡುವ ಮೂಲಕ ಈ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!