ಹೊಸದಿಗಂತ ವರದಿ,ಯಲ್ಲಾಪುರ :
ಅಪರಿಚಿತ ವ್ಯಕ್ತಿಯೋರ್ವನು ಬಲವಂತವಾಗಿ ಮೊಬೈಲ್ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳನನ್ನು ಯಲ್ಲಾಪುರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಅ.04 ರಂದು ಮಧ್ಯಾಹ್ನದ ಹೊತ್ತಿಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ದೂರುದಾರರಿಂದ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಹೋಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ತನಿಖೆ ವೇಳೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅರಫಾತ್ ಅಜೀಮಸಾಬ ಅತ್ತಾರ್ ಎಂಬ ಆರೋಪಿಯನ್ನು ಬಂಧಿಸಿರುತ್ತಾರೆ.
ಆರೋಪಿಯು ಅಂತರ್‌ಜಿಲ್ಲಾ ಕಳ್ಳನಾಗಿದ್ದು, ಈತನ ಮೇಲೆ ಅಂಕೋಲಾ, ಹುಬ್ಬಳ್ಳಿ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಪೊಲೀಸ್ ವ್ಯಾಪ್ತಿಯಲ್ಲಿಯೂ ಸಹ ಇದೇ ಮಾದರಿಯ ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿರುತ್ತದೆ. ವಿಚಾರಣೆಯ ವೇಳೆ ಕಳ್ಳತನ್ನಕ್ಕೆ ಬಳಸಲಾದ ಯಮಹಾ ಕಂಪನಿಯ ಬೈಕ್‌ನ್ನು ಸಹ ಹಾಸನ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿತನಿಂದ ಕಳ್ಳತನ ಮಾಡಲಾದ 16,500/- ಬೆಲೆಯ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ 2.20 ಲಕ್ಷ ಮೌಲ್ಯದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ, ನಿರಂಜನ ಹೆಗಡೆ ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಫಿ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಕಾಳೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿರುತ್ತಾರೆ.