ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಗಡಿಯಲ್ಲಿ ಸೇನೆ ಮಾಕ್ ಡ್ರಿಲ್ ಮಾಡಿದಂತೆ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಸರ್ಕಾರ ಆಜ್ಞೆ ಹೊರಡಿಸಿದೆ. ಜಿಲ್ಲೆಗಳಿಂದ ಹಳ್ಳಿವರೆಗೂ ಈ ಕವಾಯತು ನಡೆಸಲು ಸೂಚಿಸಲಾಗಿದೆ. ನಾಳೆ ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದ್ದು, ಇದರ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ..
ಪಹಲ್ಗಾಮ್‌ನಲ್ಲಿ ನರಮೇಧದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ನಾಳೆ ದೇಶಾದ್ಯಂತ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ನಾಗರಿಕರ ರಕ್ಷಣೆ ಸಂಬಂಧ ನಾಳೆ ದೇಶಾದ್ಯಂತ ಮಾಕ್ ಡ್ರಿಲ್ ಅಂದ್ರೆ ಅಣಕು ಪ್ರದರ್ಶನ ಮಾಡಿಸಲು ಸೂಚಿಸಿದೆ.
ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ. ದೇಶದ 244 ವರ್ಗೀಕೃತ ಜಿಲ್ಲೆಗಳಿಂದ ಗ್ರಾಮ ಮಟ್ಟದವರೆಗೂ ಮಾಕ್ ಡ್ರಿಲ್ ಆಯೋಜಿಸಲು ಕೇಂದ್ರ ಆಜ್ಞೆ ಹೊರಡಿಸಿದೆ. ಗೃಹ ರಕ್ಷಕ ದಳ, NCC, NSS ವಿದ್ಯಾರ್ಥಿಗಳು ಭಾಗವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ನಾಳೆ ಎಲ್ಲಾ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸುವ ರಕ್ಷಣಾ ಕಾರ್ಯದ ಮಾಕ್ ಡ್ರಿಲ್ ನಡೆಯಲಿದೆ.
ವಾಯು ದಾಳಿ ಎಚ್ಚರಿಕೆ ವ್ಯವಸ್ಥೆಗಳ ಪರಿಣಾಮಕಾರಿ ಮಾಹಿತಿ ಪಡೆಯಲು, ವಾಯು ಪಡೆ ಜೊತೆ ಹಾಟ್‌ಲೈನ್/ರೇಡಿಯೋ ಸಂವಹನ ಕಾರ್ಯಾಚರಣೆ ಮಾಡಲು, ನಿಯಂತ್ರಣ ಕೊಠಡಿಗಳ ಕಾರ್ಯವನ್ನು ಪರೀಕ್ಷಿಸಲು ಮಾಕ್ ಡ್ರಿಲ್ ಅಗತ್ಯವಾಗಿದೆ.
ಪ್ರತಿಕೂಲ ದಾಳಿ ಸಮಯ ತಮ್ಮನ್ನು ರಕ್ಷಿಸಿಕೊಳ್ಳಲು ಮಾಕ್ ಡ್ರಿಲ್ ಪಾಠವಾಗಲಿದೆ. ಇನ್ನು ನಾಗರಿಕ ರಕ್ಷಣಾ ಅಂಶಗಳ ಬಗ್ಗೆ ನಾಗರಿಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.