ಮೋದಿ 3.0: ವಿಜಯನಗರದಲ್ಲಿ ಕಾರ್ಯಕರ್ತರಿಂದ ಸಂಭ್ರಮ

ಹೊಸದಿಗಂತ ವರದಿ, ವಿಜಯನಗರ:

ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಐತಿಹಾಸಿಕ ನಗರಿ ವಿಜಯನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಲೋಕಸಭೆಯಲ್ಲಿ ಹ್ಯಾಟ್ರಿಕ್ ದಾಖಲೆ ಸೃಷ್ಟಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಯುವ ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹೊಸಪೇಟೆಯಲ್ಲಿ ಬೆಳಗ್ಗೆ ಇಲ್ಲಿನ ಮೂರಂಗಡಿ ಸರ್ಕಲ್‌ನಲ್ಲಿರುವ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಯಾವುದೇ ವಿಘ್ನಗಳಿಲ್ಲದೇ ಸರ್ಕಾರ ನಡೆಯಲಿ. ದೇಶ ಸುಭಿಕ್ಷೆಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಮನೆ ಮನೆಗೆ ಸಿಹಿ ವಿತರಿಸಲಾಯಿತು.

ಸಂಜೆ ೫ ಗಂಟೆಗೆ ಇಲ್ಲಿನ ಭಟ್ರಳ್ಳಿ ಆಂಜನೇಯ ದೇವಸ್ಥಾನದಿಂದ ಆರಂಭಗೊoಡ ಬೈಕ್ ರ‍್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಿಜೆಪಿ ಜಿಲ್ಲಾ ಕಚೇರಿಗೆ ತಲುಪಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು, ಬಿಜೆಪಿಯ ಬೃಹತ್ ಧ್ವಜಗಳನ್ನು ಹಿಡಿದು, ಭಾರತ ಮಾತೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಮೊಳಗಿಸಿದ ಜಯಘೋಷ ಮುಗಿಲು ಮುಟ್ಟಿತು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಮಾಯಿಸಿದ ಕಾರ್ಯರ್ತರು ಪರಸ್ಪರ ಸಿಹಿ ಹಂಚಿಕೊoಡು ಸಂಭ್ರಮಿಸಿದರು. ಬಾನಂಗಳದಲ್ಲಿ ಸಿಡಿಮದ್ದುಗಳ ಬೆಳಕಿನ ಚಿತ್ತಾರ ಹಬ್ಬದ ವಾತಾವರಣ ಸೃಷ್ಟಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!