ಫಲಾನುಭವಿಗಳೊಂದಿಗೆ ಮೋದಿ ಸಂವಾದದಲ್ಲಿ ಮಿಂಚಿದ ಕಲಬುರಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಆಜ಼ಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 8 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ವರ್ಚುವಲ್‌ ಸಂವಾದ ನಡೆಸಿದರು.

ದೇಶದ ಎಲ್ಲ ಭಾಗಗಳ ಫಲಾನುಭವಿಗಳನ್ನೊಳಗೊಂಡ ಈ ವರ್ಚುವಲ್‌ ಸಂವಾದದಲ್ಲಿ ಕರ್ನಾಟಕದ ಕಲಬುರುಗಿ ಕೂಡ ಮಿಂಚಿದ್ದು ವಿಶೇಷ. ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿಸಡಕ್‌ ಗ್ರಾಮದ ಆಯೂಷ್ಮಾನ್‌ ಭಾರತ- ವೆಲ್‌ನೆಸ್‌ ಸೆಂಟರ್ ನ ಫಲಾನುಭವಿಯಾಗಿರುವ ಮಹಿಳೆಯೊಬ್ಬರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

ಕಲಬುರಗಿಯ ಸಂತೋಷಿ ಅವರೊಂದಿಗೆ ಮಾತನಾಡಿದ ಮೋದಿಯವರು “ಸಂತೋಷಿ ಜಿ, ನೀವು ಕೇಂದ್ರ ಸರ್ಕಾರದಿಂದ ಪಡೆದ ಲಾಭವೇನು?” ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರ ಕೊಟ್ಟ ಗ್ರಾಮೀಣ ಮಹಿಳೆ ಸಂತೋಷಿಯವರು “ನನ್ನ‌ ವಯೋವೃದ್ಧ ತಾಯಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ಆರೋಗ್ಯ ಮತ್ತು ವೆಲ್‌ನೆಸ್ ಸೆಂಟರ್ ಸ್ಥಾಪನೆಯಿಂದಾಗಿ ನಮ್ಮೂರಿನಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗೇ ಬಂದು ಉಚಿತ ತಪಾಸಣೆ‌ ಕೈಗೊಂಡರು. ಜೊತೆಗೆ ಅಗತ್ಯ ಔಷಧೋಪಚಾರ ನೀಡಿದರು. ಇದರಿಂದ ನನ್ನ ತಾಯಿಯವರ ಆರೋಗ್ಯ ಬೇಗನೆ ಸುಧಾರಿಸಿತು. ಈಗ ನನ್ನ ತಾಯಿ ಆರೋಗ್ಯವಾಗಿದ್ದಾರೆ. ಹಿಂದೆ ಇಂತಹ ಸೌಲಭ್ಯಗಳಿಲ್ಲದೇ ಬಹಳ ಕಷ್ಟ ಅನುಭವಿಸಿದ್ದೇವೆ.ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿರುವ ತಮಗೂ ಮತ್ತು ತಮ್ಮ ಸರ್ಕಾರಕ್ಕೂ ನಾನು ಆಭಾರಿಯಾಗಿದ್ದೇನೆ” ಎಂದು ಕನ್ನಡದಲ್ಲೇ ತಮಗಾದ ಪ್ರಯೋಜನವನ್ನು ಎಳೆಎಳೆಯಾಗಿ ಹಂಚಿಕೊಂಡರು.

ಅವರ ಮಾತನ್ನು ಕೇಳಿದ ಪ್ರಧಾನಿ ಮೋದಿಯವರು “ನೀವು ಕನ್ನಡದಲ್ಲಿ ಮಾತನಾಡಿರುವುದು ಬಹಳ ಸಂತೋಷದ ವಿಚಾರ. ಒಂದು ವೇಳೆ ನಾನು ಕರ್ನಾಟಕದ ರಾಜಕೀಯದಲ್ಲಿದ್ದರೆ ನಿಮ್ಮನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೆ. ಸರ್ಕಾರಿ ಯೋಜನೆಗಳಿಂದ ನಿಮಗಾದ ಲಾಭದ ಕುರಿತು ಸವಿಸ್ತಾರವಾಗಿ ನೀವು ಹೇಳಿರುವ ಪರಿ ನೋಡಿದರೆ ನೀವೊಬ್ಬ ಜನನಾಯಕಿ ಆಗುವಿರಿ ಎಂದೆನಿಸುತ್ತದೆ” ಎಂದು ಪ್ರಧಾನಿ ಮೋದಿ ಹಾರೈಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!