ವಿಠ್ಠಲದಾಸ ಕಾಮತ್
ಹುಬ್ಬಳ್ಳಿ:
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಕೇವಲ ಆರೇ ತಿಂಗಳಲ್ಲಿ ಪುಟಿದೆದ್ದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವಗೆಲುವು ದಾಖಲಿಸಿದೆ.
ಚುನಾವಣಾ ಸಂದರ್ಭದಲ್ಲಿ ಹೊರ ಬಂದಿದ್ದ ಎಲ್ಲ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ದಾಖಲೆಯ ಗೆಲುವು ಪಡೆದು ಅಧಿಕಾರಕ್ಕೆ ಮರಳಿರುವ ಹಿಂದೆ ಬಿಜೆಪಿಯ ಕರಾರುವಾಕ್ ಲೆಕ್ಕಾಚಾರ ಇದೆ. ಈ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.
ಕಾರ್ಯಕರ್ತರ ಶ್ರಮ :
ಬಿಜೆಪಿಯ ಅಸಾಧಾರಣ ಗೆಲುವಿನ ಹಿಂದೆ ಬಿಜೆಪಿಯ ತಳಮಟ್ಟದ ಸಂಘಟನೆ ಮತ್ತು ಕಾರ್ಯತಂತ್ರ ಪ್ರಮುಖ ಕಾರಣ ಅನ್ನಬಹುದು. ಲೋಕಸಭೆಯ ಹಿನ್ನಡೆಯಿಂದ ದೃತಿಗೆಡದೇ ಬಿಜೆಪಿ ಈ ಬಾರಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿತು. ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಹಿಂದೂ ಮತ ಒಗ್ಗಟ್ಟಿಗೆ ಶ್ರಮಿಸಿದರು. ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಿದರು.ಇಷ್ಟೇ ಅಲ್ಲ, ಪ್ರತಿ ಬೂತ್ ಕೇಂದ್ರೀಕರಿಸಿ ಹಿಂದೂಗಳು ಮತಗಟ್ಟೆಗೆ ಬಂದು ಮತ ಚಲಾಯಿಸುವ ತನಕ ಶ್ರಮ ವಹಿಸಿದರು.
ಪ್ರಧಾನಿ ಘೋಷಣೆ:
ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಹಿಂದೂ ಮತ ಸಮೀಕರಣಕ್ಕೆ ತಮ್ಮದೇ ತಂತ್ರ ಬಳಸಿದರು. ಏಕ್ ಹೈ ತೋ ಸೇಫ್ ಹೈ ಎಂಬ ಘೋಷಣೆ ಪದೇ ಪದೇ ಮೊಳಗಿಸಿದರು.ಇದು ಹಿಂದುಗಳಲ್ಲಿ ತಾವು ಒಂದಾಗಬೇಕು ಎಂಬ ಭಾವನೆ ಧೃಡಪಡಿಸಿತು. ಮಹಾವಿಕಾಸ್ ಆಘಾಡಿಯ ಅತಿಯಾದ ತುಷ್ಟೀಕರಣ ನೀತಿ ಕಂಡಿದ್ದ ಹಿಂದೂಗಳು ಒಂದಾದರು. ಇದು ಲಾಭ ತಂದಿತು.
ಮತ ಸಮೀಕರಣ :
ಇನ್ನು ಪ್ರಧಾನಿ ಕರೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಕಾರ್ಯತಂತ್ರದ ಫಲವಾಗಿ ಶೇ.38 ರಷ್ಟಿರುವ ಓಬಿಸಿ ಮತಗಳು ಬಿಜೆಪಿಯತ್ತ ಭರಪೂರ್ ಬಂದವು. ಇಲ್ಲಿ ಫಡ್ನವೀಸ್ ಕಾರ್ಯತಂತ್ರ ಉಲ್ಲೇಖಿಸಲೇಬೇಕು. ಮೀಸಲಾತಿ ವಿಷಯದಲ್ಲಿ ಅಸಮಾಧಾನಗೊಂಡು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ದೂರ ಸರಿದಿದ್ದ ಮರಾಠಾ ಮತಗಳು ಈ ಬಾರಿ ಹಿಂದೂ ಏಕೀಕರಣದ ಕಾರಣಕ್ಕಾಗಿ ಬಿಜೆಪಿಗೆ ಬಂದವು.
ಮಹಿಳೆಯರ ಆಶೀರ್ವಾದ :
ಕೊನೆಯದಾಗಿ ಮತ್ತು ಅತಿ ಮಹತ್ವದ್ದಾಗಿ ಮಹಿಳಾ ಮತದಾರರು ಈ ಬಾರಿ ಬಿಜೆಪಿ ಮೈತ್ರಿಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕಳೆದ ಸಲಕ್ಕಿಂತ ಈ ಬಾರಿ 53 ಲಕ್ಷ ಮಹಿಳಾ ಮತದಾರರು ಮತಗಟ್ಟೆಗೆ ಬಂದಿದ್ದರು. ಇದಕ್ಕೆ ಕಾರಣ ಸರ್ಕಾರ ಮಹಿಳೆಯರಿಗಾಗಿ ತಂದಿದ್ದ ಲಾಡ್ಲಿ ಬೆಹನ್ ಯೋಜನೆ. ಇದರಡಿ ಪ್ರತಿ ತಿಂಗಳು 1500 ರೂ. ನಂತೆ 2.5 ಕೋಟಿ ಮಹಿಳೆಯರು ಲಾಭ ಪಡೆದಿದ್ದಾರೆ. ಬಿಜೆಪಿ ಮೈತ್ರಿಕೂಟ ಈಬಾರಿ ಇದನ್ನು 2100 ರೂ. ಗೆ ಏರಿಸುವುದಾಗಿ ಭರವಸೆ ಕೊಟ್ಟಿತ್ತು. ಇದು ಗಮನಾರ್ಹ ಪರಿಣಾಮ ಬೀರಿ ಮಹಿಳೆಯರ ಒಲವು ಬಿಜೆಪಿ ಮೈತ್ರಿಕೂಟಕ್ಕೆ ಆಗಿದೆ.