ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕಾರ್ಯ ಮೋದಿ ಮಾಡಿದ್ದಾರೆ: ಅಮಿತ್ ಶಾ

ಹೊಸದಿಗಂತ, ಮೈಸೂರು:

ಪ್ರಧಾನಿ ಮೋದಿ ಅವರು ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

 

ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀಕ್ಷೇತ್ರವಾದ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್, ಉಜ್ಜಯಿನಿಯಲ್ಲಿ ಮಹಾ ಕಾಳೇಶ್ವರ ಕಾರಿಡಾರ್ ಸೇರಿದಂತೆ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ದೇಶದ ಸುರಕ್ಷತೆ, ಸಮೃದ್ಧಿಗೆ ಶ್ರಮಿಸುತ್ತಿರುವ ಮೋದಿಯವರು ಯೋಗ, ಆರ್ಯುವೇದ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು, ಆದ್ಯತೆಯನ್ನು ನೀಡಿ ಕೆಲಸ ಮಾಡುತ್ತಿದ್ದಾರೆ, ನಶಿಸಿ ಹೋಗುತ್ತಿದ್ದ ನಮ್ಮ ಸಂಸ್ಕೃತಿಯನ್ನು ಉಳಿಸಿ ಪುನರ್ ಪ್ರತಿಷ್ಠಾಪನೆ ಮಾಡುವ ಮೂಲಕ ಪುನರ್ ಜೀವಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ಸುತ್ತೂರು ಮಠವನ್ನು ಇಲ್ಲಿಯ ತನಕ 24 ಮಂದಿ ಪೀಠಾಧಿಪತಿಗಳು ನಡೆಸಿಕೊಂಡು, ಅಕ್ಷರ, ಆರೋಗ್ಯ, ಅನ್ನದಾಸೋಹ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ನಿಸ್ವಾರ್ಥದಿಂದ ನಡೆಸಿಕೊಂಡು ಬಂದಿದ್ದಾರೆ. ಈಗಿನ ಶ್ರೀಗಳು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡಿದ್ದಾರೆ. ಲಿಂಗಾಯಿತ ಪರಂಪರೆಯನ್ನು ಮಠಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಹಲವು ರೀತಿಯ ಚಟುವಟಿಕೆಗಳು ನಡೆಯುವ ಮೂಲಕ ಸಮಾಜ ಸೇವೆ ಸಲ್ಲಿಸಲಾಗುತ್ತಿದೆ ಎಂದು ಶ್ಲಾಘಿಸಿದರು.

ಸುತ್ತೂರು ಸಂಸ್ಥೆಯ ವತಿಯಿಂದ ಹಲವು ರೀತಿಯ ಸೇವೆಗಳ ನಡೆಯುತ್ತಿದೆ. ಸುತ್ತೂರು ಮಠದಲ್ಲಿ 350ಕ್ಕೂ ಹೆಚ್ಚು ಸಂಸ್ಥೆಗಳಿವೆ. 20,000 ಸಿಬ್ಬಂದಿ ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವೆಲ್ಲವೂ ಉತ್ತಮವಾದ ಕಾರ್ಯ. ಶ್ರೀಗಳು ದಿವ್ಯಾಂಗರಿಗಾಗಿ ಪಾಲಿಟೆಕ್ನಿಕ್ ಒಂದನ್ನು ತೆರೆದು ನಡೆಸುತ್ತಿರುವ ಸೇವೆ ಇದೊಂದು ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಮಾಜಿ ಸಚಿವ ಸಿಟಿ ರವಿ, ಸಂಸದ ಪ್ರತಾಪ್ ಸಿಂಹ, ಪ್ರಭಾಕರ್ ಕೋರೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!