ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳಕ್ಕೆ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನು ಅಧಿಕಾರಿಯೊಬ್ಬರು ತಡೆಡಿದ್ದು, ಇದರಿಂದ ಕೋಪಗೊಂಡ ಆಕೆ ಮಾತಿಗೆ ಇಳಿದ ಘಟನೆ ಬಿಹಾರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬಕ್ಸರ್ ರೈಲ್ವೆ ನಿಲ್ದಾಣದಲ್ಲಿ ದನಪುರ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಜಯಂತ್ ಕುಮಾರ್ ಜೊತೆ ಕುಂಭಮೇಳದ ಯಾತ್ರಾರ್ಥಿಗಳ ಪೈಕಿ ಇದ್ದ ಮಹಿಳೆಯೊಬ್ಬರು ವಾಗ್ವಾದ ನಡೆಸುತ್ತಿರುವ ದೃಶ್ಯ ವೈರಲ್ ಆಗತೊಡಗಿದೆ.
ಕುಂಭಮೇಳಕ್ಕೆ ನಿರೀಕ್ಷೆಗಿಂತ ಹೆಚ್ಚು ಮಂದಿ ತೆರಳುತ್ತಿದ್ದು, ರೈಲ್ವೆ ನಿಲ್ದಾಣಗಳು ಜನಸಂದಣಿಯಿಂದ ತುಂಬಿತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ಡಿಆರ್ ಎಂ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಕೈಗೊಂಡಿದ್ದರು.ರೈಲ್ವೆ ಟ್ರ್ಯಾಕ್ ಗಳ ಮೇಲೆ ಒಂದಷ್ಟು ಮಹಿಳೆಯರು ನಿಂತಿದ್ದನ್ನು ಗಮನಿಸಿದ ಡಿಆರ್ ಎಂ, ಅವರು ಅಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಳೆಯರು ಪ್ರಯಾಗ್ ರಾಜ್ ಗೆ ತೆರಳಲು ಇಲ್ಲಿದ್ದೇವೆ ಎಂದು ಹೇಳಿದ್ದಾರೆ.
ಈ ವೇಳೆ ನಿಮ್ಮ ಬಳಿ ಟಿಕೆಟ್ ಇದೆಯೇ? ಎಂಬ ಡಿಆರ್ ಎಂ ಪ್ರಶ್ನೆಗೆ ಮಹಿಳೆ ಟಿಕೆಟ್ ಇಲ್ಲದೆಯೇ ಕುಂಭಮೇಳಕ್ಕೆ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. ಈ ರೀತಿ ಪ್ರಯಾಣಿಸಬಹುದು ಎಂದು ನಿಮಗೆ ಹೇಳಿದ್ದು ಯಾರು ಎಂದು ಕೇಳಿದ್ದಕ್ಕೆ ಬಂದ ಪ್ರತಿಕ್ರಿಯೆ ಕೇಳಿಸಿಕೊಂಡ ಡಿಆರ್ ಎಂ ದಂಗಾಗಿದ್ದಾರೆ.
ಕುಂಭಮೇಳಕ್ಕೆ ಟಿಕೆಟ್ ಇಲ್ಲದೆಯೇ ಪ್ರಯಾಣಿಸಬಹುದು ಎಂದು ಮೋದಿ ನಮಗೆ ಹೇಳಿದ್ದಾರೆ ಎಂಬ ಮಹಿಳೆಯ ಮಾತು ಕೇಳಿಸಿಕೊಂಡ ಡಿಆರ್ ಎಂ ವಾಸ್ತವಕ್ಕೆ ಬರಲು ಕೆಲ ಕ್ಷಣಗಳನ್ನು ತೆಗೆದುಕೊಂಡರು.
ಅವರು ಮಹಿಳೆಯರಿಗೆ, “ನೀವು ತಪ್ಪಾಗಿ ಭಾವಿಸಿದ್ದೀರಿ. ಪ್ರಧಾನಿಯಾಗಲಿ ಅಥವಾ ಯಾವುದೇ ಇತರ ಅಧಿಕಾರಿಯಾಗಲಿ ಇದಕ್ಕೆ ಅವಕಾಶ ನೀಡಿಲ್ಲ. ನೀವು ಪ್ರಯಾಣಿಸಲು ಬಯಸಿದರೆ, ಟಿಕೆಟ್ ಪಡೆದ ನಂತರ ಪ್ರಯಾಣ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕಾನೂನು ಉಲ್ಲಂಘಿಸಿದ ಆರೋಪ ಹೊರಿಸಬಹುದು ಎಂದು ವಿವರಿಸಿದ್ದಾರೆ.
ಈ ಕುರಿತು ವರದಿಗಾರರೊಂದಿಗೆ ಮಾತನಾಡಿದ ಡಿಆರ್‌ಎಂ, “ಮಹಾ ಕುಂಭಕ್ಕೆ, ಯಾವುದೇ ಹಬ್ಬದ ಜನದಟ್ಟಣೆಯ ಸಮಯದಲ್ಲಿ ನಾವು ಮಾಡುವ ಪ್ರಮಾಣದಲ್ಲಿ ವ್ಯವಸ್ಥೆಗಳನ್ನು ನಾವು ಮಾಡಿದ್ದೇವೆ. ಈ ಬಾರಿ ಅಸಾಮಾನ್ಯ ಸಂಗತಿಯೆಂದರೆ, ಜನದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದ್ದರೂ ಜನದಟ್ಟಣೆ ಮುಂದುವರೆದಿದೆ. ಆದಾಗ್ಯೂ, ನಾವು ವ್ಯವಸ್ಥೆಗಳನ್ನು ಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.