ಕಾಶ್ಮೀರದಲ್ಲಿ ಮೋದಿ: ಅಭಿವೃದ್ಧಿಯ ಹೊಸ ಶಕೆ ಬರೆಯಲು ಕಣಿವೆ ಪ್ರದೇಶ ಸಜ್ಜು ಎಂದ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರಾಡಳಿತ ಪ್ರದೇಶವಾದ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು -ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಆಳವಾಗಿ ಬೇರೂರಿದೆ. ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿನ ಯುವಜನತೆ ಅವರ ಪೂರ್ವಿಕರು ಪಟ್ಟ ಕಷ್ಟಗಳನ್ನು ಅನುಭವಿಸಬಾರದು. ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತಿದೆ. ಇದು ದೊಡ್ಡ ಬದಲಾವಣೆ. ಇಲ್ಲಿನ ಪ್ರಜಾಪ್ರಭುತ್ವವು ತಳಮಟ್ಟದಲ್ಲಿ ಬೆಳೆದಿದೆ ಎಂಬುದು ಹೆಮ್ಮೆಯ ವಿಷಯ. ಅದಕ್ಕಾಗಿಯೇ ನಾನು ಇಲ್ಲಿಂದಲೇ ದೇಶದಾದ್ಯಂತ ಇರುವ ಪಂಚಾಯತ್‌ಗಳೊಂದಿಗೆ ಸಂವಹನ ನಡೆಸುತ್ತಿದ್ದೇನೆ ಎಂದರು.
‘ಏಕ್ ಭಾರತ್, ಶ್ರೇಷ್ಠ ಭಾರತ’ವು ಇಡೀ ದೇಶವನ್ನು ಒಗ್ಗೂಡಿಸುತ್ತದೆ. ಇದು ಕಾಶ್ಮೀರವನ್ನು ಒಳಗೊಂಡಂತೆ ಎಲ್ಲ ರಾಜ್ಯಗಳನ್ನೂ ಒಟ್ಟಾಗಿಸುತ್ತದೆ. ಇದೇ ನಮ್ಮ ಸರ್ಕಾರ ಗುರಿ. ಕಳೆದ 2-3 ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಾದ ಬದಲಾವಣೆಗಳು ಹೊಸ ಭಾಷ್ಯ ಬರೆದಿವೆ. ಇಲ್ಲಿ ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದು ತಿಳಿಸಿದರು.
ಕೇಂದ್ರಾಡಳಿತ ಪ್ರದೇಶ ಅಭಿವೃದ್ಧಿಯ ಹೊಸ ಶಕೆಯನ್ನು ಬರೆಯಲು ಸಜ್ಜಾಗಿದೆ. ಸ್ವಾತಂತ್ರ್ಯ ಬಂದ 7 ದಶಕಗಳ ಅವಧಿಯಲ್ಲಿ ಇಲ್ಲಿ ಕೇವಲ 17,000 ಕೋಟಿ ರೂಪಾಯಿ ಖಾಸಗಿ ಹೂಡಿಕೆಯನ್ನು ಮಾತ್ರ ಮಾಡಲಾಗಿತ್ತು. ಇದೀಗ ಅದು 38,000 ಕೋಟಿಗೆ ತಲುಪಿದೆ. ಇದು ಇಲ್ಲಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಧಾನಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!