ದಿಗಂತ ವರದಿ ಶಿವಮೊಗ್ಗ :
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಮೇಲೆ ಪ್ರಸಕ್ತ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಪ್ರಧಾನ ಮಂತ್ರಿ ಸ್ಥಾನದಲ್ಲಿ ಕೂರಲು ಮೋದಿಯೇ ಸೂಕ್ತವೆಂದು ದೇಶದ ಜನ ತೀರ್ಮಾನಿಸಿದ್ದಾರೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದಾಕ್ಷಣ ಇದೇ ಸತ್ಯವೆಂದು ನಂಬುವ ಸ್ಥಿತಿಯಲ್ಲಿ ಮತದಾರರಿಲ್ಲ. ಮತದಾರರ ಚಿಂತನೆ ಕೂಡ ಉನ್ನತ ಮಟ್ಟದಲ್ಲಿದೆ. ಇಂತಹ ಚಿಂತನೆಗಳಿಂದಾಗಿಯೇ ದೇಶಕ್ಕೆ ಮೋದಿ ಎಂಬ ನಿಲುವಿಗೆ ಜನ ಬಂದಿದ್ದಾರೆ ಎಂದರು.
ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬುದು ಮಾತ್ರ ಮತಚಲಾವಣೆಗೆ ಮಾನ ದಂಡ ಆಗುವುದಿಲ್ಲ. ಪ್ರಕೃತಿ ವಿಕೋಪದಂತಹ ಸ್ಥಿತಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಎನ್‌ಡಿಆರ್‌ಎಫ್ ಪರಿಹಾರ ಬರುವುದು ಯಾವಾಗಲೂ ವಿಳಂಬವಾಗುತ್ತದೆ. ಕರ್ನಾಟಕದ ವಿಚಾರದಲ್ಲಿ ಕೂಡ ಪರ ಪರಿಹಾರ ಬಿಡುಗಡೆಯಾಗುವುದು ವಿಳಂಬವಾಗಿದೆ ಎಂದರು.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಫ್ರೆಂಡ್ಲಿಯಾಗಿ ನಡೆದುಕೊಳ್ಳಬೇಕು. ಆದರೆ ಇಲ್ಲಿ ಕರ್ನಾಟಕ ಹಾಗೆ ನಡೆದುಕೊಂಡಿಲ್ಲ. ದೆಹಲಿವರೆಗೆ ಹೋಗಿ ಪ್ರತಿಭಟನೆ ನಡೆಸಿದರು. ಇದು ಬೇಕಿತ್ತಾ ಎಂದರು.
ಗ್ಯಾರಂಟಿಗಳನ್ನು ನೀಡಿದ್ದೇವೆ, ಚೊಂಬಿನಂತಹ ಜಾಹೀರಾತುಗಳನ್ನು ನೀಡಿದ್ದೇವೆ ಎಂದುಕೊಂಡರೆ ಅದೇ ಸತ್ಯವೆಂದು ಜನ ನಂಬುವುದಿಲ್ಲ. ದೇಶದ ಆರ್ಥಿಕತೆ ಇನ್ನಷ್ಟು ಸುಧಾರಿಸಬೇಕು, ಅಂತಾರಾಷ್ಟ್ರೀಯ ಸಂಬಂಧಗಳು ಗಟ್ಟಿಯಾಗಬೇಕು, ದೇಶದ ಗಡಿ ವಿಚಾರ ಬಂದಾಗ ಅದನ್ನು ಬಲವಾಗಿ ಪ್ರತಿಪಾದಿಸುವ ಸಮರ್ಥ ನಾಯಕ ಯಾರಾಗಬೇಕೆಂಬುದನ್ನು ಮತದಾರರು ಪರಿಗಣಿಸಲಿದ್ದಾರೆ ಎಂದರು.
ಎಲೆಕ್ಟ್ರೋಲ್ ಬಾಂಡ್‌ಗೆ ಸಂಬಂಧಪಟ್ಟಂತೆ ಇಂಡಿ ಒಕ್ಕೂಟದವರೂ ಕೂಡ ಹೆಚ್ಚಿನ ಫಂಡ್ ಪಡೆದಿದ್ದಾರೆ. ಆದರೆ ಅದನ್ನು ಹೈಲೆಟ್ ಮಾಡುತ್ತಿಲ್ಲ. ಯುಪಿಎ ಸರ್ಕಾರ ಇದ್ದಾಗಲೂ ಕೂಡ ಚುನಾವಣೆಗೆ ಹೆಚ್ಚಿನ ಫಂಡ್ ಪಡೆದಿರುವ ದಾಖಲೆ ಇದೆ. ಹಾಗೆ ನೋಡಿದರೆ ಈಗ ಎನ್‌ಡಿಎ ಪಡೆದಿರುವುದು ಕೇವಲ ಶೇ.43 ರಷ್ಟು ಮಾತ್ರ. ಉಳಿದ ಶೇ.57 ರಷ್ಟನ್ನು ಇಂಡಿ ಒಕ್ಕೂಟದವರು ಪಡೆದಿದ್ದಾರೆ ಎಂದು ಹೇಳಿದರು. ಕರ್ನಾಟಕದಲ್ಲಿ ರಾಜಕೀಯ ಶಕ್ತಿ ಯಾರ ಬಳಿ ಇರಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿಎಂ, ಡಿಸಿಎಂ, ಗೃಹಮಂತ್ರಿ, ಶಿಕ್ಷಣ ಮಂತ್ರಿನಾ ಎಂಬ ಗೊಂದಲವಿದೆ. ಹೀಗಾಗಿ ಪೊಲೀಸ್ ವ್ಯವಸ್ಥೆ ಕೂಡ ಗೊಂದಲದಲ್ಲಿದೆ. ಈ ರೀತಿ ಆದಾಗ ಕಾನೂನು ಸುವ್ಯವಸ್ಥೆಗೆ ತೊಡಕಾಗುತ್ತದೆ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಹೆಚ್ಚಿನ ಸ್ಥಾನ ಪಡೆಯಲಿದ್ದು, ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಥಾನ ಬರಲಿವೆ. ಕೇರಳದಲ್ಲಿ ಸುಮಾರು 20 ಸ್ಥಾನಕ್ಕಿಂತ ಹೆಚ್ಚು ಗುರಿ ಇದೆ. ಗೋವಾ ಎರಡೂ ಸ್ಥಾನ ಬಿಜೆಪಿಗೆ ಬರಲಿವೆ. ಆಂಧ್ರದಲ್ಲಿ ಎನ್‌ಡಿಎ ಮೈತ್ರಿ ಕೂಡ ಹೆಚ್ಚು ಸ್ಥಾನ ಪಡೆಯಲಿದೆ. ತಮಿಳುನಾಡಿನಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಾಗಲಿವೆ. ತೆಲಂಗಾಣದಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.