ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂಬೈನಲ್ಲಿ ಇಂದು ನಡೆದ 80ನೇ ವಾರ್ಷಿಕ ‘ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಮತ್ತು ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆಗಾಗಿ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ‘ನನಗೆ ಲತಾ ದೀದಿ ಸಹೋದರಿ ಇದ್ದಂತೆ. ನಾನು ಯಾವಾಗಲೂ ಅವರಿಂದ ಅಪಾರ ಪ್ರೀತಿ ಗಳಿಸಿದ್ದೇನೆ. ಹಾಗಾಗಿ, ಈ ಪ್ರಶಸ್ತಿಯನ್ನು ಒಪ್ಪಿಕೊಳ್ಳದಿರಲು ಸಾಧ್ಯವೇ ಇಲ್ಲ. ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ ಎಂದು ಪ್ರಥಮ ‘ಲತಾ ದೀನನಾಥ್ ಮಂಗೇಶ್ಕರ್’ ಪ್ರಶಸ್ತಿ ಸ್ವೀಕರಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.
ಲತಾ ಮಂಗೇಶ್ಕರ್ ಅವರು ಯಾವಾಗಲೂ ಬಲಿಷ್ಠ ಮತ್ತು ಸಮೃದ್ಧ ಭಾರತದ ಕನಸು ಕಾಣುತ್ತಿದ್ದರು. ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಈ ವರ್ಷದ ಪ್ರಾರಂಭದಲ್ಲಿ ಮುಂಬೈನಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಭಾರತ ರತ್ನ ಲತಾ ಮಂಗೇಶ್ಕರ್ ಅವರ ಸ್ಮರಣೆ ಹಾಗೂ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.