ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರನ್ನು ಭೇಟಿಯಾಗಿದ್ದಾರೆ. ಕಳೆದ ಆಗಸ್ಟ್ನಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಪದಚ್ಯುತಿ ಬಳಿಕ ಈ ಇಬ್ಬರು ನಾಯಕರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ಈ ವೇಳೆ ಮೋದಿ, ಬಾಂಗ್ಲಾದೇಶದಲ್ಲಿರುವ ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಗಡಿ ಮತ್ತು ಕಾನೂನಿನ ಕಟ್ಟುನಿಟ್ಟಿನ ಜಾರಿ, ಗಡಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ವಿಶೇಷವಾಗಿ ರಾತ್ರಿಯಲ್ಲಿ ಅಕ್ರಮ ಗಡಿ ದಾಟುವಿಕೆಗಳನ್ನು ತಡೆಯುವ ಬಗ್ಗೆ ಈ ವೇಳೆ ಮಾತನಾಡಿದರು.
ಈ ಕುರಿತು ಮಾಹಿತಿ ನೀಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ , ಪ್ರಧಾನಿ ಮೋದಿ ಅಲ್ಪಸಂಖ್ಯಾತರನ್ನು ರಕ್ಷಿಸುವ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಬಾಂಗ್ಲಾದೇಶವು ಈ ಕಳವಳಗಳನ್ನು ಪರಿಹರಿಸುತ್ತದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಶಾಂತಿಯುತ, ಸ್ಥಿರವಾದ ಮತ್ತು ಎಲ್ಲರ ಕಾಳಜಿಯನ್ನು ನೋಡುವ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಎರಡೂ ದೇಶಗಳ ನಡುವಿನ ದೀರ್ಘಕಾಲದ ಸಹಕಾರವನ್ನು ತಿಳಿಸಿದರು. ಇದು ಎರಡೂ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡಿದೆ. ನೆರೆಯ ದೇಶದೊಂದಿಗೆ ಸಕಾರಾತ್ಮಕ ಮತ್ತು ಪ್ರಾಯೋಗಿಕ ಸಂಬಂಧವನ್ನು ನಿರ್ಮಿಸುವ ಭಾರತದ ಬಯಕೆಯನ್ನು ಮೋದಿ ಒತ್ತಿ ಹೇಳಿದ್ದಾರೆ.
ಬಾಂಗ್ಲಾದೇಶ ಸರ್ಕಾರವು ಅವರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆ ಮಾಡುವ ಮೂಲಕ ಅವರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂಬ ನಿರೀಕ್ಷೆಯನ್ನು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವ ವಿಷಯವನ್ನು ಮೊಹಮ್ಮದ್ ಯೂನಸ್ ಎತ್ತಿದ್ದಾರೆಯೇ ಎಂದು ಕೇಳಿದಾಗ, ಮಿಶ್ರಿ ನೇರ ಉತ್ತರವನ್ನು ನೀಡಲಿಲ್ಲ. ಈ ವಿಷಯದ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು.