ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭಾಷಣದ ಕುರಿತು ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಎಕ್ಸ್ ಮೂಲಕ ನೀಡಿರುವ ಪ್ರಶಂಸೆಯು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಉದ್ವಿಗ್ನತೆ ಮತ್ತು ಬಿಸಿ ಚರ್ಚೆಗೆ ಕಾರಣವಾಗಿದೆ. ಭಾರತವನ್ನು ‘ಉದಯೋನ್ಮುಖ ಮಾದರಿ’ ಎಂದು ಚಿತ್ರಿಸಿದ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಶಶಿ ತರೂರ್ ಮುಕ್ತವಾಗಿ ಶ್ಲಾಘಿಸಿದ್ದರು.
ಕಪಟತನದ ಆರೋಪ ಮತ್ತು ನಿಷ್ಠೆಯ ಪ್ರಶ್ನೆ
ತರೂರ್ ಅವರ ಈ ನಿಲುವಿನಿಂದಾಗಿ, ಹಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ಶಶಿ ತರೂರ್ ಅವರ ಪಕ್ಷದ ನಿಷ್ಠೆಯ ಬಗ್ಗೆ ನೇರವಾಗಿಯೇ ಪ್ರಶ್ನೆ ಎತ್ತಿದ್ದಾರೆ. “ನೀವು ಕಾಂಗ್ರೆಸ್‌ನಲ್ಲಿ ಏಕೆ ಇದ್ದೀರಿ?” ಎಂದು ಪ್ರಶ್ನಿಸಿದ ದೀಕ್ಷಿತ್ ಅವರು, ತರೂರ್ ಅವರನ್ನು ‘ಕಪಟ’ ಎಂದು ಜರಿದಿದ್ದಾರೆ.
ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಕೂಡ ಮೋದಿಯವರ ಭಾಷಣವನ್ನು ‘ಕ್ಷುಲ್ಲಕ’ ಎಂದು ತೀಕ್ಷ್ಣವಾಗಿ ಟೀಕಿಸುವ ಮೂಲಕ ತರೂರ್ ಅವರ ಹೇಳಿಕೆಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ.
ಮೋದಿ ಭಾಷಣದತ್ತ ತರೂರ್ ಒಲವು
ಜಾಗತಿಕ ಸವಾಲುಗಳ ಮಧ್ಯೆ ಭಾರತವನ್ನು ಕೇವಲ “ಉದಯೋನ್ಮುಖ ಮಾರುಕಟ್ಟೆ” ಯಿಂದ “ಉದಯೋನ್ಮುಖ ಮಾದರಿ”ಯಾಗಿ ಪರಿವರ್ತಿಸುವ ಪ್ರಧಾನಿ ಮೋದಿ ಅವರ ದೂರದೃಷ್ಟಿಯತ್ತ ತರೂರ್ ಅವರ ಹೊಗಳಿಕೆಯು ಕೇಂದ್ರೀಕೃತವಾಗಿತ್ತು. ವಸಾಹತುಶಾಹಿ ಗುಲಾಮ ಮನಸ್ಥಿತಿಯನ್ನು ನಿರ್ಮೂಲನೆ ಮಾಡುವ ಮತ್ತು ಭಾರತೀಯ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಮೂಲಕ ರಾಷ್ಟ್ರೀಯ ಹೆಮ್ಮೆಯನ್ನು ಉತ್ತೇಜಿಸುವ ಮೋದಿಯವರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಆದಾಗ್ಯೂ, ಪಕ್ಷದೊಳಗೆ ತೀವ್ರ ವಿರೋಧ ಎದುರಾಗುತ್ತಿದ್ದರೂ, ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಯಾವುದೇ ಯೋಜನೆಯನ್ನು ನಿರಾಕರಿಸಿದ್ದಾರೆ.

