ಕರ್ನಾಟಕದಲ್ಲಿ ಮೋದಿ ತಂತ್ರಗಾರಿಕೆ ನಡೆಯಲ್ಲ: ಸಚಿವ ಎನ್. ಎಸ್. ಬೋಸರಾಜು

ಹೊಸದಿಗಂತ ವರದಿ, ಮಡಿಕೇರಿ :

ಕರ್ನಾಟಕದಲ್ಲಿ ಮೋದಿಯವರ ತಂತ್ರಗಾರಿಕೆ ನಡೆಯುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಸಭೆ ನಡೆಸಿದ್ದು, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರುಗಳು ಚುನಾವಣೆ ಸಂದರ್ಭ ಮತದಾರರಿಗೆ ಕೊಟ್ಟ ಮಾತನ್ನು ನಡೆಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮೋದಿಯವರ ತಂತ್ರಗಾರಿಕೆ ನಡೆಯುವುದಿಲ್ಲ ಎಂದು ಹೇಳಿದರು.

ಆಪರೇಷನ್ ಹಸ್ತ ಇಲ್ಲ: ಆಪರೇಷನ್ ಹಸ್ತ ಪದವನ್ನು ನಾವು ಬಳಕೆ ಮಾಡಲ್ಲ. ‘ಆಪರೇಷನ್’ ಎಂಬ ಕೆಟ್ಟ ಶಬ್ಧ ತಂದಿದ್ದು ಬಿಜೆಪಿ. ಹಲವು ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ. ಎಂದು ವ್ಯಂಗವಾಡಿದ ಅವರು, ನಮ್ಮಲ್ಲಿ ಯಾವುದೇ ಆಪರೇಷನ್ ಹಸ್ತ ಎಂಬುದಿಲ್ಲ. ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಅವರಾಗಿಯೇ ಬರುತ್ತಾರೆ. ಅಂತಹವರನ್ನು ಪಕ್ಷ ಬರಮಾಡಿಕೊಳ್ಳಲಿದೆ ಎಂದು ತಿಳಿಸಿದರು.

ಪಕ್ಷ ಸೇರ್ಪಡೆಗೆ ಹಲವು ಹೊಸ ಹೊಸ ಮುಖಗಳ ಹೆಸರುಗಳು ಬರುತ್ತಿದೆ. ಅನೇಕ ಜಿಲ್ಲೆಗಳಿಂದ ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅನೇಕ ನಾಯಕರು ಈಗಾಗಲೇ ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿದ್ದಾರೆ. ಕಲ್ಯಾಣ ಕರ್ನಾಟಕದಲ್ಲೂ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಿಷ್ಟೇ ಜನ ಬರುತ್ತಾರೆಂದು ಹೇಳಲಾಗದು ಎಂದು ನುಡಿದರು.

ರಾಜ್ಯದಲ್ಲಿ ಬಿಜೆಪಿಗೆ ನಾಯಕರೇ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆದಿದೆ. ಇಂದಿಗೂ ಬಿಜೆಪಿ ಪರಿಸ್ಥಿತಿ ಬದಲಾಗಿಲ್ಲ ಎಂದು ಸಚಿವರು ಕುಟುಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!