ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ (Maldives President election) ಫಲಿತಾಂಶ ಪ್ರಕಟವಾಗಿದ್ದು, ಪ್ರೊಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್(PPM)ನಾಯಕ ಮೊಹಮ್ಮದ್ ಮೊಯಿಜ್ಜು (Mohamed Muizzu) ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ನೂತನ ಅಧ್ಯಕ್ಷರಾಗಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಫಲಿತಾಂಶ ಈಗ ಪ್ರಕಟವಾಗಿದ್ದು, ಮೊದಲ ಸುತ್ತಿನ ಫಲಿತಾಂಶದ ವೇಳೆ ಯಾವ ಅಭ್ಯರ್ಥಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಎರಡನೇ ಸುತ್ತಿನ ಮತ ಏಣಿಕೆಯನ್ನು ಕೈಗೊಳ್ಳಲಾಗಿತ್ತು. ಮೊಹಮ್ಮದ್ ಅವರು ಮೊದಲನೇ ಸುತ್ತಿನಲ್ಲಿ ಶೇ.46ರಷ್ಟು ಮತಗಳನ್ನು ಪಡೆದುಕೊಂಡರೆ, ಎದುರಾಳಿ ಇಬ್ರಾಹಿಮ್ ಸೋಲಿಹ್(Ibrahim Solih) ಅವರು ಶೇ.39ರಷ್ಟು ಮತ ಪಡೆದಿದ್ದರು. ಎರಡನೇ ಸುತ್ತಿನಲ್ಲಿ ಪಿಪಿಎಂ ನಾಯಕ ಮೊಹಮ್ಮದ್ ಅವರು ಶೇ.53 ಮತಗಳ ಮೂಲಕ ಸ್ಪಷ್ಟ ಗೆಲುವು ಸಾಧಿಸಿದ್ದಾರೆ.
ಭರ್ಜರಿ ಜಯದೊಂದಿಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಮೊಯಿಜ್ಜು ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಅವರು ತಮಗೆ ಮತಗಳನ್ನು ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಇದೇ ವೇಳೆ, ಭ್ರಷ್ಟಾಚಾರ ಅಪರಾಧಕ್ಕಾಗಿ 11 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಬಿಡುಗಡೆಗೆ ಕರೆ ನೀಡಿದರು.
ಈ ದಿನ ಸಂತೋಷದ ಸುದಿನವಾಗಿದೆ. ಮಾಲ್ಡೀವ್ಸ್‌ನ ಎಲ್ಲ ಜನರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ. ಇಂದಿನ ಈ ಫಲಿತಾಂಶವು ನಮ್ಮ ದೇಶಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಮತ್ತು ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಅನ್ವೇಷಣೆಯಲ್ಲಿ ನಮಗೆ ಒಂದು ದೊಡ್ಡ ಉತ್ತೇಜನವಾಗಿದೆ ಎಂದು ಹೇಳಿದರು.