ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿಯಾದರು.
ಈ ಭೇಟಿಯ ಬಳಿಕ ಮಾತನಾಡಿರುವ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ಆರೆಸ್ಸೆಸ್ ಮುಖ್ಯಸ್ಥರನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ. ನನ್ನ ಆಹ್ವಾನದ ಮೇರೆಗೆ ಇಂದು ಮೋಹನ್ ಭಾಗವತ್ ಜೀ ನಮ್ಮ ಮಸೀದಿಗೆ ಬಂದಿದ್ದರು. ಅವರೊಬ್ಬ ರಾಷ್ಟ್ರಪಿತ ಹಾಗೂ ರಾಷ್ಟ್ರಋಷಿ. ಅವರ ಈ ಭೇಟಿಯಿಂದ ಖಂಡಿತವಾಗಿ ಸಮಾಜಕ್ಕೆ ಉತ್ತಮ ಸಂದೇಶವೊಂದು ತಲುಪುತ್ತದೆ. ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ ಆದರೆ ದೊಡ್ಡ ಧರ್ಮವೆಂದರೆ ಮಾನವೀಯತೆ. ದೇಶವು ಮೊದಲು ಬರುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಕಸ್ತೂರ್ ಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಈ ಸಭೆ ನಡೆದಿತ್ತು. ಅಂದಾಜು ಒಂದು ಗಂಟೆಗಳ ಕಾಲ ಮೋಹನ್ ಭಾಗವತ್ ಹಾಗೂ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರ ಸಭೆ ನಡೆದಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಕಸ್ತೂರಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಮುಖ್ಯ ಇಮಾಮ್ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮತ್ತು ಇತರ ಮುಸ್ಲಿಂ ಮುಖಂಡರನ್ನು ಭೇಟಿಯಾಗಿ ಅವರ ಸ್ಥಿತಿಯನ್ನು ವಿಚಾರಿಸಿದರು. ಆ ನಂತರ ಮೋಹನ್ ಭಾಗವತ್ ಆಜಾದ್ ಬಜಾರ್ ನ ಮದರಸಾ ತಲುಪಿ ಅಲ್ಲಿ ಕೆಲ ಸಮಯ ಕಳೆದರು. ಇಲ್ಲಿ ಅವರು ಮದರಸಾದ ಮಕ್ಕಳನ್ನು ಭೇಟಿಯಾದರು.