ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಉತ್ತಮ ಆರೋಗ್ಯಕ್ಕಾಗಿ ನಟ ಮೋಹನ್ ಲಾಲ್ ಶಬರಿ ಮಲೆ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಪ್ರಾರ್ಥನೆ ಹಾಗೂ ಪೂಜೆ ವೇಳೆ, ಮಮ್ಮುಟ್ಟಿ ಅವರ ನಿಜವಾದ ಹೆಸರು ಮುಹಮ್ಮದ್ ಕುಟ್ಟಿ ಎಂದು ಹೇಳಿ ಅವರ ನಕ್ಷತ್ರದ ಹೆಸರನ್ನು ಹೇಳಿ ಉಷಾ ಪೂಜೆ ನೆರವೇರಿಸಿದ್ದು ಹಲವರನ್ನು ಕೆರಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಇದನ್ನು ಸೌಹಾರ್ದತೆಯ ಸಂಕೇತ, ಭಾವೈಕ್ಯತೆಯ ಪ್ರತಿಬಿಂಬ ಎಂದರೆ ಇನ್ನೂ ಕೆಲವರು ಇಸ್ಲಾಂ ಧರ್ಮದ ನೀತಿಗೆ ವಿರುದ್ಧವಾದ ಕೆಲಸವನ್ನು ನಟ ಮೋಹನ್ ಲಾಲ್ ಮಾಡಿದ್ದಾರೆ, ಮಮ್ಮುಟ್ಟಿ ಅಲ್ಲಾಹುವನ್ನು ಮಾತ್ರ ಆರಾಧಿಸಬೇಕೆಂಬ ವಾದ ಮಾಡುತ್ತಿದ್ದಾರೆ.
ಈ ವಾದ-ಪ್ರತಿವಾದದ ನಡುವೆ ಭಾರತದ ಖ್ಯಾತ ಗೀತ ರಚನೆಕಾರ ಹಾಗು ಚಿತ್ರಕಥೆಗಾರ ಜಾವೇದ್ ಅಖ್ತರ್ ಕೂಡ ಎಂಟ್ರಿಯಾಗಿದ್ದಾರೆ.
ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ ಅವರು, ಭಾರತದ ಪ್ರತಿಯೊಬ್ಬ ಮಮ್ಮುಟ್ಟಿಗೂ ಮೋಹನ್ ಲಾಲ್ ಅವರಂತಹ ಸ್ನೇಹಿತ ಇರಬೇಕು, ಪ್ರತಿಯೊಬ್ಬ ಮೋಹನ್ ಲಾಲ್ಗೂ ಮಮ್ಮುಟ್ಟಿಯಂತಹ ಗೆಳೆಯ ಇರಬೇಕೆಂದು ನಾನು ಬಯಸುತ್ತೇನೆ. ಅವರಿಬ್ಬರ ಈ ಸ್ನೇಹ ಸಂಕುಚಿತ ಮನಸ್ಸಿನ ವ್ಯಕ್ತಿಗಳಿಗಿಂತ, ನಕಾರಾತ್ಮಕ ಆಲೋಚನೆ ಮಾಡುವರಿಗಿಂತ ತುಂಬಾ ಮೀಗಿಲಾದದ್ದು’ ಎಂದು ಜಾವೆದ್ ಅಖ್ತರ್ ಹೇಳಿದ್ದಾರೆ.
ಇನ್ನು ಮೋಹನ್ ಲಾಲ್ ಅವರು ‘ಪೂಜೆ ಸಲ್ಲಿಸುವುದು ಬಿಡುವುದು ನನ್ನ ವ್ಯೆಯಕ್ತಿಕ ವಿಚಾರ.ಮಮ್ಮುಟ್ಟಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ, ಹೀಗಾಗಿ ಪೂಜೆ ಸಲ್ಲಿಸಿದ್ದೇನೆ ಅದರಲ್ಲಿ ತಪ್ಪೇನು?’ ಎಂದು ಪ್ರಶ್ನೆ ಮಾಡಿದ್ದರು. ಇನ್ನು ಈ ವಿಚಾರಕ್ಕೆ ಪೃಥ್ವಿರಾಜ್ ಸುಕುಮಾರನ್ ಸಹ ಪ್ರತಿಕ್ರಿಯೆ ನೀಡಿ ಇದನ್ನು ಇನ್ನಷ್ಟು ದೊಡ್ಡದು ಮಾಡಿದ್ದಾರೆ. ‘ಮೋಹನ್ ಲಾಲ್ ಅವರು ಈ ರೀತಿಯ ಪೂಜೆಗಳನ್ನು ಮಾಡುತ್ತಿರೋದು ಇದು ಮೊದಲೇನಲ್ಲ, ಈ ಬಾರಿ ಅದು ಸುದ್ದಿಯಾಗಿದೆ ಅಷ್ಟೇ’ ಎಂದು ಹೇಳಿದ್ದರು.