Wednesday, December 6, 2023

Latest Posts

ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ದಯವಿಟ್ಟು ನೀವು ,ಅಪ್ಪ ಸಮಯಕ್ಕೆ ಸರಿಯಾಗಿ ಊಟ ಮಾಡಿ: ಸುರಂಗದಿಂದ ಬಂತು ಭಾವುಕ ನುಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ, ಸಮಯಕ್ಕೆ ಸರಿಯಾಗಿ ಊಟ ಮಾಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ’ ಈ ಮಾತು ಕೇಳಿ ಬಂದದ್ದು ಉತ್ತರಕಾಶಿಯ ಸುರಂಗದಿಂದ…

ಹೌದು, ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರೊಬ್ಬರು (Labor) ತಮ್ಮ ತಾಯಿಗೆ ತಲುಪಿಸಿದ ಭಾವುಕ ಸಂದೇಶ ಇದಾಗಿತ್ತು.

ಸುರಂಗದೊಳಗೆ (Silkyara Tunnel) ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರ ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನ ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತ್ರ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗಿದ್ದು, ಇದರಿಂದ ಕಾರ್ಮಿಕರ ರಕ್ಷಣೆಗೆ ಬಹುತೇಕ ಪರಿಹಾರ ಸಿಕ್ಕಂತಾಗಿದೆ.

ಸುರಂಗದಲ್ಲಿ ಸಿಲುಕಿಕೊಂಡವರೊಂದಿಗೆ ಸಂವಹನ ನಡೆಸುವ ಕಾರ್ಯ ಯಶಸ್ವಿಯಾಗಿದ್ದು, ಈ ವೇಳೆ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಒಬ್ಬರಾದ ಜೈದೇವ್‌, ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತನ್ನ ಹೇಳಿಕೆಯನ್ನ ರೆಕಾರ್ಡ್‌ ಮಾಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಹೇಳಿಕೆಯನ್ನು ತನ್ನ ತಾಯಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ.

ಮೇಲ್ವಿಚಾರಕರು ಕಾರ್ಮಿಕನ ಹೇಳಿಕೆ ರೆಕಾರ್ಡ್‌ ಮಾಡುತ್ತಿದ್ದಂತೆ, ‘ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ ಸಮಯಕ್ಕೆ ಸರಿಯಾಗಿ ಊಟ ಮಾಡಿ ಆರೋಗ್ಯ ನೋಡಿಕೊಳ್ಳಿ’ ಎಂದು ಭಾವುಕ ನುಡಿಗಳನ್ನಾಡಿದ್ದಾರೆ.

ಬಳಿಕ ಮೇಲ್ವಿಚಾರಕರು ಚಿಂತಿಸಬೇಡಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಅಭಯ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!