ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮನಬಿಚ್ಚಿ ಮಾತನಾಡಿದ್ದು, ವಿಶ್ವಕಪ್ ತಪ್ಪಿದ್ದಕ್ಕೆ ಈಗ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ನಿರಾಸೆಯಾಗಿದ್ದರೂ, ಆ ಸಮಯದಲ್ಲಿ ತಂದೆಯ ಜೊತೆ ಇರಲು ಸಾಧ್ಯವಾದುದು ದೊಡ್ಡ ಸಂತೋಷ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್, ಫೆಬ್ರವರಿ 1ರಂದು ತಮ್ಮ ತಂದೆ ಮೋಹನ್ ಶರ್ಮಾ ನಿಧನರಾದರು ಎಂದು ತಿಳಿಸಿದ್ದಾರೆ. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಂಡಕ್ಕೆ ಆಯ್ಕೆಯಾಗದ ಕಾರಣ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಸಮಯ ಕಳೆಯಲು ಸಾಧ್ಯವಾಯಿತು ಎಂದು ಭಾವನಾತ್ಮಕವಾಗಿ ಹೇಳಿದರು. “ನನ್ನ ತಂದೆಗೆ ವಿಶ್ವಕಪ್‌ಗಿಂತ ನನ್ನ ಅಗತ್ಯ ಹೆಚ್ಚಿತ್ತು” ಎಂಬ ಮಾತುಗಳನ್ನೂ ಅವರು ಹಂಚಿಕೊಂಡಿದ್ದಾರೆ.
ತಂಡದಿಂದ ಹೊರಬಿದ್ದಾಗ ಆರಂಭದಲ್ಲಿ ಬೇಸರವಾಗಿದ್ದರೂ, ತಂದೆಯ ನಿಧನದ ಬಳಿಕ ಆ ನೋವು ಮಾಯವಾಯಿತು ಎಂದು ಜಿತೇಶ್ ಹೇಳಿದ್ದಾರೆ. ಮಗನಾಗಿ ಅವರ ಕೊನೆಯ ಕ್ಷಣಗಳಲ್ಲಿ ಜೊತೆಗಿರುವ ಅವಕಾಶ ಸಿಕ್ಕಿದ್ದು ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ.



