ಹೊಸದಿಗಂತ ವರದಿ , ಮಡಿಕೇರಿ:
ಮಡಿಕೇರಿ ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯಕ್ಕೆ ನುಗ್ಗಿ ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ನಗದು ಹಣವನ್ನು ಅಪಹರಿಸಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಅಸ್ಸಾಂ ಮೂಲದವರಾಗಿದ್ದು, ಪ್ರಸ್ತುತ ಮಡಿಕೇರಿ ತಾಲೂಕಿನ ಕಾಂತೂರು-ಮೂರ್ನಾಡು ಗ್ರಾಮದ ತೆಕ್ಕಡೆ ಪ್ರಸನ್ನ ಅವರ ತೋಟದ ಲೈನು ಮನೆಯಲ್ಲಿ ವಾಸವಿರುವ ಅಲ್ತಾಬ್ ಆಲಿ (27) ಹಾಗೂ ಕೃತ್ಯ ನಡೆಸುವ ಉದ್ದೇಶದಿಂದಲೇ ಅಸ್ಸಾಂನಿಂದ ಅಗಮಿಸಿದ್ದ ಮೀರ್ ಹುಸೇನ್ ಅಲಿಯಾಸ್ ನೂರ್ ಹುಸೇನ್( 36 ) ಎಂದು ಗುರುತಿಸಲಾಗಿದೆ.
ಆರೋಪಿಗಳು ಕಳವು ಮಾಡಿದ್ದ 3 ಗ್ರಾಂ ಚಿನ್ನದ ಮಾಂಗಲ್ಯ, 111 ಗ್ರಾಂ ಬೆಳ್ಳಿಯ ಕಿರೀಟ, 59 ಗ್ರಾಂ ಬೆಳ್ಳಿಯ ದೃಷ್ಟಿ ಬೊಟ್ಟು ಸೇರಿದಂತೆ ಆಭರಣಗಳನ್ನು ಮತ್ತು 95,501 ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಮಡಿಕೇರಿ ನಗರದ ಕೋಟೆ ಮಾರಿಯಮ್ಮ ದೇವಾಲಯಕ್ಕೆ ಆ.16 ರ ಮಧ್ಯರಾತ್ರಿಯಲ್ಲಿ ಅಪರಿಚಿತ ವ್ಯಕ್ತಿಗಳು ಆಗಮಿಸಿ ಮುಖ್ಯ ದ್ವಾರದ ಬೀಗವನ್ನು ಮುರಿದು ದೇವಸ್ಥಾನದಲ್ಲಿದ್ದ ಎರಡು ಭಂಡಾರದ ಹುಂಡಿಗಳನ್ನು ಒಡೆದು ಅಂದಾಜು ರೂ. 2.50ಲಕ್ಷ ರೂ. ನಗದು ಹಾಗೂ ದೇವಿಯ ಮೂರ್ತಿಗೆ ಅಳವಡಿಸಿದ್ದ ಸುಮಾರು 1.16ಲಕ್ಷ ರೂ. ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ಸೋಮಯ್ಯ ಅವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್, ಮಡಿಕೇರಿ ಡಿವೈ ಎಸ್ಪಿ ಮಹೇಶ್ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.
ಮಡಿಕೇರಿ ಡಿವೈಎಸ್ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ವೃತ್ತದ ಇನ್ಸ್‌ಪೆಕ್ಟರ್ ರಾಜು,ಪಿಎಸ್ಐ ಲೋಕೇಶ್, ಮಡಿಕೇರಿ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಿ ಘಟನೆ ನಡೆದ ಒಂದು ವಾರದ ಒಳಗಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಕೆ.ರಾಮರಾಜನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಅವರು, ಈ ಪ್ರಕರಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.