ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಮನಕ್ಕೂ ಮುನ್ನವೇ ಆರ್ಭಟಿಸಿದ್ದ ಮುಂಗಾರು ಈಗ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಮಾರುತಗಳು ಮತ್ತಷ್ಟು ದುರ್ಬಲಗೊಳ್ಳುವ ಮೂಲಕ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಜೂನ್ ಅಂತ್ಯದ ತನಕವೂ ಹೀಗೆಯೇ ಮುಂದುವರಿಯುವ ಸೂಚನೆಯನ್ನು ಮುಂಗಾರು ನೀಡಿದೆ.
ರಾಜಧಾನಿಗೆ ಮುಸಲಧಾರೆ!
ಜೂ.3ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಇನ್ನು ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಅಲ್ಲಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಕರಾವಳಿಯಲ್ಲಿ ಮತ್ತೆ ಬಿಸಿಲು
ಕಾಸರಗೋಡು, ದಕ್ಷಿಣ ಕನ್ನಡ ಸಹಿತ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಆಗಾಗ ಅಲ್ಲಲ್ಲಿ ಒಂದೆರಡು ಸಣ್ಣ ಪ್ರಮಾಣದ ಮಳೆ ನಿರೀಕ್ಷಿಸಬಹುದಾಗಿದೆ.
ರಾಜ್ಯದ ಉಳಿದ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ಒಂದಿಷ್ಟು ತುಂತುರು ಮಳೆಯ ಸಾಧ್ಯತೆ ಇದೆ.