ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಪರಿಷತ್‌ನಲ್ಲಿ ಮೊದಲ ದಿನವೇ ಹಗರಣಗಳ ಸದ್ದು ಪ್ರಸ್ತಾಪವಾಗಿದೆ. ಕಲಾಪ ಆರಂಭಗೊಳ್ಳುತ್ತಿದ್ದಂತೆ ವಾಲ್ಮೀಕಿ ನಿಗಮದ ಹಗರಣ ವಿಚಾರ ಪ್ರಸ್ತಾಪವಾಗಿದೆ.
ಬಿಜೆಪಿ ಸದಸ್ಯ ಸಿ.ಟಿ ರವಿ ವಾಲ್ಮೀಕಿ ನಿಗಮದ ಹಗರಣ ಕುರಿತು ನಿಲುವಳಿ ಮಂಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್ ಸಹ ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣವನ್ನು ಬಳ್ಳಾರಿ ಚುನಾವಣೆ ( ಹಾಗೂ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ದೊಡ್ಡ ಈ ಬಗ್ಗೆ ದೊಡ್ಡ ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಇದೇ ವೇಳೆ ಸಿ.ಟಿ ರವಿ ಸಹ, 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ. ಅಹಿಂದ ರಾಜಕಾರಣ ಮಾಡೋರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಣ ನುಂಗಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ನಿಯಮದ ಪ್ರಕಾರ ನಾವು ಎಲ್ಲದಕ್ಕೂ ಸಮಯ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ ಆದ್ಮೇಲೆ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡ್ತೀನಿ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ವಿಚಾರ ಪ್ರಸ್ತಾಪ
ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಆಡಳಿತ ಕಾಂಗ್ರೆಸ್ ಪಕ್ಷದ ವಿರುದ್ಧ ಮುಗಿಬಿದ್ದರು. ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟರು. ಪಡಿತರ ಚೀಟಿ ವಿವರಣೆ ಮಾಡಿ 3 ವರ್ಷ ಆಗಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ, ಕೂಡಲೇ ಸರ್ಕಾರದಿಂದ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ (BPL Card) ವಿತರಿಸುವ ಕೆಲಸ ಆಗಬೇಕು. ಬಿಪಿಎಲ್ ಕಾರ್ಡ್ ಜೊತೆಗೆ ಎಪಿಎಲ್ ಕಾರ್ಡನ್ನೂ ಕೊಡಬೇಕು. ಬಿಪಿಎಲ್‌ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ನಿಂದ ಮೆಡಿಕಲ್ ಗೂ ಸಹಾಯ ಆಗಲಿದೆ. ಹೀಗಾಗಿ ಶೀಘ್ರವೇ ಪಡಿತರ ಚೀಟಿ ಕೊಡಿ ಎಂದು ಆಗ್ರಹಿಸಿರು.
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಹಿಂದಿನ ಸರ್ಕಾರದಲ್ಲಿ ಚುನಾವಣೆಗೂ ಮುನ್ನ 2.95 ಲಕ್ಷ ಅರ್ಜಿಗಳು ಬಿಪಿಎಲ್‌ಗೆ ಬಂದಿದ್ದವು. ಈಪೈಕಿ 2.35 ಲಕ್ಷ ಕಾರ್ಡ್ ಬಿಪಿಎಲ್‌ಗೆ ಅರ್ಹತೆ ಪಡೆದಿದೆ. 56 ಸಾವಿರ ಕಾರ್ಡ್ ಬಿಪಿಎಲ್ ಅರ್ಹತೆ ಪಡೆದಿಲ್ಲ. ಅರ್ಹತೆ ಪಡೆದ 2.35 ಲಕ್ಷ ಕಾರ್ಡ್ ಪೈಕಿ 62 ಸಾವಿರ ಕಾರ್ಡ್ ಗಳಿಗೆ ಈಗಾಗಲೇ ಪಡಿತರ ಕೊಡ್ತಿದ್ದೇವೆ. ಉಳಿದ 1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಶೀಘ್ರವೇ ಪಡಿತರ ಕೊಡುವ ವ್ಯವಸ್ಥೆ ಮಾಡಿಸ್ತೀವಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪಡಿತರ ಚೀಟಿಗೆ ಅರ್ಜಿ ಹಾಕೋರಿಗೆ ಒಂದು ವಾರದಲ್ಲಿ ಪಡಿತರ ಚೀಟಿ ಕೊಡೋ ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು.