July 26, 2026
Sunday, July 26, 2026
spot_img

Monsoon Travel | ಪ್ರಕೃತಿ ಪ್ರೇಮಿಗಳ ಸ್ವರ್ಗ: ಮುಂಗಾರಿನ ಸೌಂದರ್ಯ ಸವಿಯಲು ಇವೇ ನೋಡಿ ಬೆಸ್ಟ್ ಪ್ಲೇಸಸ್!

ಕರ್ನಾಟಕದ ಪ್ರಕೃತಿ ಸೌಂದರ್ಯಕ್ಕೆ ಯಾವುದೇ ಋತುವಿನ ಹಂಗಿಲ್ಲ. ಆದರೆ ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ಮಳೆಗಾಲದ ಅವಧಿಯಲ್ಲಿ ಇಲ್ಲಿನ ಸೌಂದರ್ಯವು ಇಮ್ಮಡಿಯಾಗುತ್ತದೆ. ವಾಣಿಜ್ಯ ನಗರಿಗಳ ಜಂಜಾಟದಿಂದ ದೂರ ಸರಿದು, ಮಂಜಿನ ಹನಿಗಳು ಮತ್ತು ತಣ್ಣನೆಯ ಗಾಳಿಯ ಮಡಿಲಲ್ಲಿ ಕಳೆಯಲು ಬಯಸುವ ಪ್ರಕೃತಿ ಪ್ರೇಮಿಗಳಿಗೆ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಸ್ವರ್ಗದಂತೆ ಭಾಸವಾಗುತ್ತವೆ. ಈ ಮಳೆಗಾಲದಲ್ಲಿ ನೀವು ಖಂಡಿತವಾಗಿಯೂ ಮಿಸ್ ಮಾಡದೇ ಭೇಟಿ ನೀಡಲೇಬೇಕಾದ ಪ್ರಮುಖ ತಾಣಗಳಿವು.

ಜೋಗ ಜಲಪಾತ

ಮಳೆಗಾಲದ ಪ್ರವಾಸ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ. ಭಾರತದ ಅತಿ ಎತ್ತರದ ನೇರ ಜಲಪಾತಗಳಲ್ಲಿ ಒಂದಾದ ಜೋಗವು ಮಳೆಗಾಲದಲ್ಲೇ ತನ್ನ ಸಂಪೂರ್ಣ ಯೌವನವನ್ನು ಪಡೆದುಕೊಳ್ಳುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಧಾರೆಗಳು ಶರಾವತಿ ನದಿಯಿಂದ ಜಿಗಿದು ಸುಮಾರು 829 ಅಡಿ ಎತ್ತರದಿಂದ ಧುಮುಕುವ ದೃಶ್ಯವನ್ನು ಕಣ್ಣುತುಂಬಿಕೊಳ್ಳುವುದೇ ಒಂದು ರೋಮಾಂಚನ. ಸುತ್ತಲೂ ಆವರಿಸುವ ಮಂಜು ಮತ್ತು ಕ್ಷಣಮಾತ್ರದಲ್ಲಿ ಮರೆಯಾಗುವ ಜಲಪಾತದ ದೃಶ್ಯಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಕೊಡಗು ಮತ್ತು ಚಿಕ್ಕಮಗಳೂರು

‘ಭಾರತದ ಸ್ಕಾಟ್‌ಲ್ಯಾಂಡ್’ ಎಂದೇ ಪ್ರಸಿದ್ಧಿಯಾಗಿರುವ ಕೊಡಗು ಮಳೆಗಾಲದಲ್ಲಿ ಹಸಿರು ಹೊದಿಕೆಯನ್ನು ಹೊದ್ದಿ ನಿಲ್ಲುತ್ತದೆ. ಇಲ್ಲಿನ ಕಾಫಿ ತೋಟಗಳ ಸುವಾಸನೆ ಮತ್ತು ಸದಾ ಸುರಿಯುವ ಜಿಟಿಜಿಟಿ ಮಳೆ ಪ್ರವಾಸದ ಮಜಾವನ್ನು ಹೆಚ್ಚಿಸುತ್ತದೆ.

ಮತ್ತೊಂದೆಡೆ, ಕರ್ನಾಟಕದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರಿನ ‘ಮುಳ್ಳಯ್ಯನಗಿರಿ’ಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಒಂದು ವಿಭಿನ್ನ ಅನುಭವ. ಇಲ್ಲಿನ ರಸ್ತೆಗಳಲ್ಲಿ ಸಾಗುವಾಗ ಮೋಡಗಳು ನಿಮ್ಮನ್ನು ಮುಟ್ಟಿ ಹಾದುಹೋಗುವಂತೆ ಭಾಸವಾಗುತ್ತದೆ. ಬಾಬಾಬುಡನ್‌ಗಿರಿ ಮತ್ತು ಹೆಬ್ಬೆ ಜಲಪಾತಗಳು ಈ ಸಮಯದಲ್ಲಿ ಪ್ರಕೃತಿ ಪ್ರಿಯರ ನೆಚ್ಚಿನ ತಾಣಗಳಾಗಿವೆ.

ಆಗುಂಬೆ

ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆಯು ದಟ್ಟವಾದ ಮಳೆಕಾಡುಗಳಿಗೆ ಹೆಸರುವಾಸಿ. ಮಳೆಗಾಲದಲ್ಲಿ ಇಲ್ಲಿನ ಪಶ್ಚಿಮ ಘಟ್ಟಗಳ ಸೌಂದರ್ಯವು ಉತ್ತುಂಗದಲ್ಲಿರುತ್ತದೆ. ಟ್ರೆಕ್ಕಿಂಗ್ ಹವ್ಯಾಸವಿರುವವರಿಗೆ ಮತ್ತು ಸರಿಸೃಪಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಆಗುಂಬೆ ಅದ್ಭುತ ಜಾಗ. ಇಲ್ಲಿನ ಜೋಗಿಗುಂಡಿ ಮತ್ತು ಕುಂದಾದ್ರಿ ಬೆಟ್ಟಗಳು ಮಳೆಗಾಲದ ಮಂಜಿನ ನಡುವೆ ಅದ್ಭುತವಾಗಿ ಕಾಣುತ್ತವೆ.

ಸಕಲೇಶಪುರ ಮತ್ತು ಬಿಸ್ಲೆ ಘಾಟ್

ಹಾಸನ ಜಿಲ್ಲೆಯ ಸಕಲೇಶಪುರವು ತನ್ನ ಹಸಿರು ಬೆಟ್ಟಗಳು ಮತ್ತು ಸದ್ದಿಲ್ಲದ ವಾತಾವರಣಕ್ಕೆ ಹೆಸರುವಾಸಿ. ಇಲ್ಲಿನ ಪ್ರಸಿದ್ಧ ನಕ್ಷತ್ರಾಕಾರದ ‘ಮಂಜರಾಬಾದ್ ಕೋಟೆ’ ಮಳೆಯ ಸಮಯದಲ್ಲಿ ಇತಿಹಾಸ ಮತ್ತು ಪ್ರಕೃತಿಯ ಅಪೂರ್ವ ಸಂಗಮದಂತೆ ಕಾಣುತ್ತದೆ. ಅದರಲ್ಲೂ ‘ಬಿಸ್ಲೆ ಘಾಟ್ ವ್ಯೂ ಪಾಯಿಂಟ್’ನಿಂದ ಕಾಣುವ ಮೂರು ಜಿಲ್ಲೆಗಳ (ಹಾಸನ, ಕೊಡಗು, ದಕ್ಷಿಣ ಕನ್ನಡ) ಪರ್ವತ ಶ್ರೇಣಿಗಳ ನೋಟ ಮಳೆಗಾಲದಲ್ಲಿ ಮರೆಯಲಾಗದ ದೃಶ್ಯ ವೈಭವವನ್ನು ಸೃಷ್ಟಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !