ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಇದೀಗ ಜೆಡಿಎಸ್ ಕೂಡ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಪ್ರಾಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರಲ್ಲಿಸಭೆ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷಿತ ಸೀಟನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲೋಕಸಭೆಯತ್ತ ದೃಷ್ಟಿ ನೆಡಲಾಗಿದೆ.ಅಲ್ಲದೆ, ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕುಮಾರ ಸ್ವಾಮಿ ಅವರು ಮಾತನಾಡಿ, ಲೋಕಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 15ರ ನಂತರ ರಾಜ್ಯಾಧ್ಯಂತ ಪಕ್ಷದ ಪ್ರಮುಖ ಮುಖಂಡರು ಪ್ರವಾಸ ಮಾಡಲಿದ್ದಾರೆ. ನಾನೂ ಸೇರಿ ಪಕ್ಷದ ಬಹುತೇಕ ಹಿರಿಯ ನಾಯಕರು ಪ್ರವಾಸ ಕೈಗೊಳ್ಳುವರು ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಯಾರೂ ಎದೆಗುಂದುವುದು ಬೇಡ. ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು. ಪಕ್ಷ ಸಂಘಟನೆಗೆ ಬಹಳಷ್ಟು ಒತ್ತು ಕೊಟ್ಟು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸೋಣ.ನಮ್ಮ ಹೋರಾಟ ಸಂಘಟಿತವಾಗಿರಬೇಕು ಹಾಗೂ ವಿಷಯಾಧಾರಿತ ಆಗಿರಬೇಕು. ಜನಪರವಾಗಿ ಇರಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ಹೋರಾಟ ಮಾಡುತ್ತೇವೆ. ಅಲ್ಲದೆ, ಪಕ್ಷದ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ ಎಂದರು.