ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಜಾರಿಗೆ ತರುವ ಸರಕಾರದ ಯೋಜನೆಯು ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದ್ದು, ಇದರ ಭಾಗವಾಗಿ ಇಂದು . ಧರ್ಮಗುರುಗಳ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದೆ.
ಈ ಸಭೆಯಲ್ಲಿ ಧರ್ಮಾತೀತವಾಗಿ ಎಲ್ಲಾ ಗುರುಗಳು ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಜಾರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಮಠಾಧೀಶರು, ಧರ್ಮಗುರುಗಳು, ಶಿಕ್ಷಣ ತಜ್ಞರ ದುಂಡು ಮೇಜಿನ ಸಭೆಯಲ್ಲಿ ಶಾಲಾ ಹಂತದಲ್ಲಿ ಕಡ್ಡಾಯವಾಗಿ ನೈತಿಕ ಶಿಕ್ಷಣ ಅವಶ್ಯಕತೆ ಇದೆ ಎಂದು ಧರ್ಮ ಗುರುಗಳು ಸಲಹೆ ನೀಡಿದ್ದಾರೆ. ಅಲ್ಲದೆ ನೈತಿಕ ಶಿಕ್ಷಣದಲ್ಲಿ ಯಾವ ಯಾವ ಮೌಲ್ಯಯುತ ಅಂಶಗಳು ಸೇರಿಸಬೇಕು ಎಂದು ಹೇಳಿದ್ದಾರೆ.
ಸಭೆಯಲ್ಲಿ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಸಿರಿಗೆರೆ ಶ್ರೀಗಳು, ರವಿಶಂಕರ್ ಗುರೂಜಿ, ಪೇಜಾವರ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ರಾಘವೇಶ್ವರ ಶ್ರೀಗಳು, ಪೀಟರ್ ಮ್ಯಾಚಾರೋ, ಡಾ. ಕಸ್ತೂರಿ ರಂಗನ್, ಅಬ್ದುಲ್ ರಹೀಂ ಸೇರಿ ಹಲವು ಧರ್ಮಗಳ ಧರ್ಮಗುರುಗಳು ಭಾಗವಹಿಸಿ ಅಭಿಪ್ರಾಯ ತಿಳಿಸಿದ್ದಾರೆ.
ಸುತ್ತೂರು ಶ್ರೀಗಳು ರಾಮಾಯಣ, ಮಹಾಭಾರತ ನೀತಿ ಪಾಠದ ಜೊತೆ ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಪ್ರಸ್ತಾಪ ಮಾಡಿದರು. ಸಿರಿಗೆರೆ ಶ್ರೀಗಳು ಸಭೆಯಲ್ಲಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಿಚುಂಚನಗಿರಿ ಬಾಲ್ಯದಿಂದ ಮೌಲ್ಯ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು. ಮುಸ್ಲಿಂ ಧರ್ಮಗುರುಗಳು ಹಾಗೂ ಕ್ರೈಸ್ತ ಧರ್ಮಗುರುಗಳು ನೈತಿಕ ಶಿಕ್ಷಣದ ಅವಶ್ಯಕತೆ ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಬಿಸಿ ನಾಗೇಶ್, ಶ್ರೀಗಳು, ಧರ್ಮಗುರುಗಳ ಅಭಿಪ್ರಾಯ ಪಡೆಯಲಾಗಿದೆ. ನೈತಿಕ ಶಿಕ್ಷಣ ಜಾರಿ ಪ್ರಕ್ರಿಯೆಗೆ ಸಮಿತಿ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ಜಾರಿ ಮಾಡೋದಾಗಿ ತಿಳಿಸಿದರು.