ಪಕ್ಷ ತೊರೆದು ಈಗ ‘ಕಮಲ’ದ ಅಂಗಳಕ್ಕೆ ಮತ್ತಷ್ಟು ಮುಖಂಡರ ದೌಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚುನಾವಣೆ ಕಾವು ದಿನೇ ದಿನೇ ಏರುತ್ತಿರುವ ನಡುವೆಯೇ ಮತ್ತಷ್ಟು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮುದ್ದೇಬಿಹಾಳ ಕ್ಷೇತ್ರದ ಜೆಡಿಎಸ್ ರಾಜ್ಯ ಉಪಾಧ್ಯಕ್ಷೆ ಮಂಗಳಾಬಾಯಿ ಎಸ್. ಬಿರಾದಾರ್, ಖಜಾಂಚಿ ಮಹಾಂತಗೌಡ ಪಾಟೀಲ್, ಮುದ್ದೇಬಿಹಾಳ ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಭುಗೌಡ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ್, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪಗೌಡ ಹಂಡರಗಲ್,
ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮತ್ತು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಾಬುರಾವ್ ಮಲ್ಕಾಪುರೆ, ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವಕುಮಾರ್ ಸ್ವಾಮಿ, ಭಾಲ್ಕಿ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರರೆಡ್ಡಿ, ಅಂಬಿಗರ ಚೌಡಯ್ಯ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಜಿಲ್ಲಾ ಟೊಕರಿ ಕೋಳಿ ಸಮಾಜ ಅಧ್ಯಕ್ಷ ಜಗನಾಥ ಜಮಾದರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪಾಟೀಲ್ ಸಂಗೊಳಗಿ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಭೂಷಣ ಮುಡೇಪ್ಪಾ ಕಮಠಾಣೆ, ಬೀದರ್ ಜಿಲ್ಲಾ ಕುರುಬ ಸಮಾಜ ಪ್ರಧಾನ ಕಾರ್ಯದರ್ಶಿ ರಘುನಾಥ ರಾಯಗೊಂಡ, ಎ.ಪಿ.ಎಂ.ಸಿ ಹುಮ್ನಾಬಾದ್ ಮಾಜಿ ಅಧ್ಯಕ್ಷ ಬಸವರಾಜ ನೀಲಾ, ಮಾನ್ಯಖೇಡ ಗ್ರಾ.ಪಂ. ಸದಸ್ಯರು ಮತ್ತು ಮಾಜಿ ಅಧ್ಯಕ್ಷ ಸಂತೋಷ್ ಹಳ್ಳಿಖೇಡ, ಜೆಡಿಎಸ್ ಮುಖಂಡ ವಿಜಯಕುಮಾರ ಸ್ವಾಮಿ ಮತ್ತು ಯುವ ಉದ್ಯಮಿ ರಾಜಶೇಖರ್ ಕಾಶೀನಾಥ ನೌಬಾದೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಜಗನ್ನಾಥ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ನಳಿನ್, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವು ಭಾರತವನ್ನು ಜಗದ್ವಂದ್ಯ ಮಾಡಿದೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರಕಾರದ ಸಾಧನೆಗಳು ಜನಮೆಚ್ಚುಗೆ ಪಡೆದಿವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಸವರಾಜ ಬೊಮ್ಮಾಯಿಯವರ ಸರಕಾರದ ಜನಪರ ಆಡಳಿತವಿದೆ. ಅದನ್ನು ಮೆಚ್ಚಿ ನೀವು ಪಕ್ಷಕ್ಕೆ ಬಂದಿದ್ದೀರಿ ಎಂದರು.

ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಮತ್ತೆ ಆಡಳಿತಕ್ಕೆ ತರುವ ದೃಷ್ಟಿಯಿಂದ ನಿರಂತರವಾಗಿ ಪಾರ್ಟಿಯನ್ನು ಶಕ್ತಿಶಾಲಿಯನ್ನಾಗಿ ಮಾಡಲು ನೀವೆಲ್ಲ ಶ್ರಮ ವಹಿಸುವ ವಿಶ್ವಾಸ ಇದೆ. ಆರಂಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಮತ್ತೆ ನಾಯಕರಾಗಿ ಬೆಳೆಯುವ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸಚಿವ ಭಗವಂತ್ ಖೂಬಾ ಮಾತನಾಡಿ, ಬೀದರ್ ಮತ್ತು ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಬಿಜೆಪಿ ಸೇರಿದ್ದಾರೆ. ಇದು ಬಿಜೆಪಿಗೆ ಹೆಚ್ಚಿನ ಬಲ ತಂದಿದೆ ಎಂದರು.

ಬಿಜೆಪಿ ತತ್ವ- ಸಿದ್ಧಾಂತ, ನರೇಂದ್ರ ಮೋದಿಯವರ ಪ್ರಭಾವಿ ವ್ಯಕ್ತಿತ್ವವನ್ನು ಮೆಚ್ಚಿ ನವಕರ್ನಾಟಕ, ನವ ಭಾರತ ನಿರ್ಮಾಣಕ್ಕಾಗಿ ಮತ್ತು ಸಮಾಜದವನ್ನು ಸದೃಢ ಮಾಡಲು ಪಕ್ಷ ಸೇರಿದ್ದೀರಿ. 21 ಕೋಟಿಗೂ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ. ನಿಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಅವರ ಗೆಲುವಿಗೆ ಹಗಲಿರುಳೆನ್ನದೆ ಶ್ರಮಿಸಿ, ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮತ್ತೆ ರಾಜ್ಯದಲ್ಲಿ ಬಿಜೆಪಿ ಕರ್ನಾಟಕದ ಆರೂವರೆ ಕೋಟಿ ಜನರ ಆಶೀರ್ವಾದ ಪಡೆದು ಜನಸೇವೆ ಮಾಡಲು ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಾಸಕ ಕೆ.ಎಸ್.ಪಾಟೀಲ್ ನಡಹಳ್ಳಿ, ಶೈಲೇಂದ್ರ ಬೆಲ್ದಾಳೆ, ಬಾಬು ಅಲಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!