ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಕೆಲವೇ ಗಂಟೆಗಳ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜನಸಾಮಾನ್ಯ ಕೈಯಲ್ಲಿ ಹೆಚ್ಚಿನ ಹಣ ಉಳಿಸುವುದೇ ನಮ್ಮ ಉದ್ದೇಶ . ನಮ್ಮ ಬಜೆಟ್ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿದೆ ಎಂದರು.
ಹೆಚ್ಚಿನ ವೈದ್ಯಕೀಯ ಸೀಟುಗಳನ್ನು ಲಭ್ಯಗೊಳಿಸಲಾಗಿದೆ. ಪರಮಾಣು ಶಕ್ತಿ ಕಾಯಿದೆ ಮತ್ತು ಪರಮಾಣು ಹಾನಿಯ ನಾಗರಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಗಳು ಇಂಧನ ಭದ್ರತೆಗೆ ಸಹಾಯ ಮಾಡುತ್ತವೆ ಎಂದು ಹಣಕಾಸು ಸಚಿವರು ವಿವರಿಸಿದರು.
ಆದಾಯ ತೆರಿಗೆ ಸ್ಲ್ಯಾಬ್ ದರಗಳಲ್ಲಿ ಮರುಜೋಡಣೆಯೊಂದಿಗೆ, ಕೇಂದ್ರವು “ಜನರ ಕೈಗೆ ಹೆಚ್ಚಿನ ಹಣವನ್ನು ನೀಡಿದೆ” ಎಂದರು. 12 ಲಕ್ಷಕ್ಕೆ ರಿಯಾಯಿತಿಯನ್ನು ಹೆಚ್ಚಿಸುವುದರೊಂದಿಗೆ ಕೇಂದ್ರ ಬಜೆಟ್‌ನಲ್ಲಿ 1 ಕೋಟಿ ಹೆಚ್ಚು ಜನರು ಆದಾಯ ತೆರಿಗೆಯನ್ನು ಪಾವತಿಸುವುದಿಲ್ಲ ಎಂದು ಸೀತಾರಾಮನ್ ಹೇಳಿದರು.
ಕೇಂದ್ರ ಬಜೆಟ್ ‘ವಿಕ್ಷಿತ್ ಭಾರತ್’ ಕುರಿತು ಹಲವಾರು ವಿಷಯಗಳನ್ನು ಹೇಳುತ್ತದೆ . ಆದರೆ ಇದು ಗ್ರಾಮೀಣ ಸಮೃದ್ಧಿ ಮತ್ತು ನಗರಾಭಿವೃದ್ಧಿ ಎರಡನ್ನೂ ಕೇಂದ್ರೀಕರಿಸಿದೆ ಎಂದು ಹೇಳಿದರು.
ಬಜೆಟ್ ಕೂಡ ಸುಧಾರಣೆಗಳತ್ತ ಗಮನ ಹರಿಸುತ್ತಿದೆ. ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಿರುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.