ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಕ್ಕಿ ಜ್ವರ ಭೀತಿ ಬಳ್ಳಾರಿಯಲ್ಲಿ ಹೆಚ್ಚಾಗಿದ್ದು, ಈ ವರೆಗೂ 20,000ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಕಪ್ಪಗಲ್ಲುವಿನ ಸರ್ಕಾರಿ ಕೋಳಿ ಸಾಕಣೆ ಕೇಂದ್ರದಲ್ಲಿ 3 ದಿನಗಳ ಹಿಂದೆ 8,000 ಕೋಳಿಗಳು ಸಾವನ್ನಪ್ಪಿದ್ದವು. ಇದೀಗ ಮತ್ತಷ್ಟು ಕೋಳಿಗಳು ಸಾವನ್ನಪ್ಪಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.
ಕುರೇಕೊಪ್ಪ ಮತ್ತು ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರಗಳಲ್ಲಿ ಸಾವಿರಾರು ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ. ಈ ನಡವೆ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಹಕ್ಕಿ ಜ್ವರಕ್ಕೆ ಕಾರಣವಾಗಿರುವ H5N1 ಸೋಂಕು ಹರಡುವಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದ್ದಾರೆ.
ಸೋಂಕು ಕುರಿತು ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದಾರೆ.
ಜಿಲ್ಲಾಡಳಿತದಿಂದ, ಕೋಳಿ ಸಾಕಣೆ ಕೇಂದ್ರಗಳ ಒಳಗೆ ಸ್ಯಾನಿಟೈಸೇಶನ್ ಮತ್ತು ಕೋಳಿಗಳಿಗೆ ಔಷಧಿಗಳನ್ನು ನೀಡುವಂತಹ ಎಲ್ಲಾ ಕ್ರಮಗಳನ್ನು ಕೊಳ್ಳಲಾಗಿದೆ. ಜನರು ಕೋಳಿ ಮಾಂಸವನ್ನು ಸೇವಿಸುವ ಮೊದಲು ಕನಿಷ್ಠ 70 ಡಿಗ್ರಿ ಸೆಲ್ಸಿಯಸ್ ವರೆಗೆ ಬೇಯಿಸಿ ತಿನ್ನಬೇಕು. ಅಧಿಕಾರಿಗಳ ತಂಡಗಳು ಸೋಂಕು ಪೀಡಿತ ಕೋಳಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ಹೇಳಿದ್ದಾರೆ.