ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ-ಉಕ್ರೇನ್ ನಡುವಿನ ಯುದ್ಧ 9ನೇ ತಿಂಗಳು ಪೂರೈಸುತ್ತಿರುವಂತೆ ಪ್ರಮುಖ ಪ್ರದೇಶವಾದ ಖೈರ್ಸನ್ ಅನ್ನು ರಷ್ಯಾದ ಪಡೆಗಳು ತೊರೆದಿವೆ. ರಷ್ಯಾ ಪಡೆಗಳ ಹಿಮ್ಮೆಟ್ಟುವಿಕೆಯ ನಂತರ ಮುನ್ನುಗ್ಗಿದ ಉಕ್ರೇನ್ ಖೈರ್ಸನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಇದೀಗ ರಷ್ಯಾದ ಹಿಮ್ಮೆಟ್ಟುವಿಕೆಯ ನಂತರ ಖೈರ್ಸನ್ ಪ್ರದೇಶದಲ್ಲಿ 400ಕ್ಕೂ ಹೆಚ್ಚು ನಾಗರಿಕರ ಹಾಗೂ ಸೈನಿಕರ ಶವ ಪತ್ತೆಯಾಗಿದೆ ಎಂದುನ ಉಕ್ರೇನ್ ತನಿಖಾಧಿಕಾರಿಗಳು ಹೇಳಿದ್ದಾರೆ.ತನಿಖಾಧಿಕಾರಿಗಳು 400 ಕ್ಕೂ ಹೆಚ್ಚು ಯುದ್ಧ ಅಪರಾಧಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಆದರೆ ಮಾಸ್ಕೋ ಈ ಆರೋಪಗಳನ್ನು ತಳ್ಳಿ ಹಾಕಿದ್ದು ತನ್ನ ಪಡೆಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದನ್ನು ನಿರಾಕರಿಸುತ್ತದೆ ಎನ್ನಲಾಗಿದೆ.
ಏತನ್ಮಧ್ಯೆ, ಉಕ್ರೇನಿಯನ್ ಅಧಿಕಾರಿಗಳು ಆ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದ್ದಾರೆ ಮತ್ತು ಖೆರ್ಸನ್ ಒಳಗೆ ಮತ್ತು ಹೊರಗೆ ಪ್ರಯಾಣವನ್ನು ನಿರ್ಬಂಧಿಸಿದ್ದಾರೆ.
ಖೆರ್ಸನ್ ಪ್ರದೇಶದಲ್ಲಿ, ರಷ್ಯಾದ ಸೈನ್ಯವು ನಮ್ಮ ದೇಶದ ಇತರ ಪ್ರದೇಶಗಳಲ್ಲಿ ಮಾಡಿರುವಂತೇ ಅದೇ ದೌರ್ಜನ್ಯವನ್ನು ನಡೆಸಿದೆ. ನಾವು ಪ್ರತಿ ಕೊಲೆಗಾರರನ್ನು ಪತ್ತೆ ಹಚ್ಚುತ್ತೇವೆ ಮತ್ತು ನಿಸ್ಸಂದೇಹವಾಗಿ ನ್ಯಾಯ ನೀಡುತ್ತೇವೆ ಎಂದು ಝೆಲೆನ್ಸ್ಕಿ ತಮ್ಮ ರಾತ್ರಿಯ ವೀಡಿಯೊ ಭಾಷಣದಲ್ಲಿ ಹೇಳಿದ್ದಾರೆ.
ಯುದ್ಧದ ಆರಂಭದಿಂದಲೂ, ಬುಚಾ, ಇಝಿಯಂ ಮತ್ತು ಮರಿಯುಪೋಲ್ ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಸಾಮೂಹಿಕ ಸಮಾಧಿಗಳು ಕಂಡುಬಂದಿವೆ. ಈ ದುಷ್ಕೃತ್ಯದ ಹಿಂದೆ ರಷ್ಯಾದ ಸೈನಿಕರ ಕೈವಾಡವಿದೆ ಎಂದು ಉಕ್ರೇನ್ ಆರೋಪಿಸಿದೆ.
ಯುಎನ್ ಕಮಿಷನ್ ಕಳೆದ ತಿಂಗಳು ಉಕ್ರೇನ್‌ನಲ್ಲಿ ಯುದ್ಧಾಪರಾಧಗಳು ನಡೆದಿವೆ ಮತ್ತು ಆಕ್ರಮಣದ ಪ್ರಾರಂಭದಲ್ಲಿ “ಬಹುಪಾಲು” ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ರಷ್ಯಾದ ಪಡೆಗಳು ಜವಾಬ್ದಾರವಾಗಿವೆ ಎಂದು ಹೇಳಿದೆ.