ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದ್ದು, ಸಂಭಾವ್ಯ ಪ್ರವಾಹ ಸ್ಥಿತಿ ಎದುರಿಸಲು ಎಲ್ಲಾ ಜಿಲ್ಲಾಡಳಿತಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಅವರು ಬೆಂಗಳೂರಿನಲ್ಲಿಂದು ಸಚಿವರು, ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೆ ಪ್ರವಾಹ ಸ್ಥಿತಿ ಎದುರಿಸಿದ್ದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶೂಕ್ತ ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರ ಪರಿಹಾರ ಹಣ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ಜನತೆಗೆ ಯಾವುದೇ ತೊಂದರೆ ಇದ್ದರೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದೆ. ಯಾವುದೇ ಕಾರಂಕ್ಕೂ ಕೃಷಿ ಸಾಮಗ್ರಿಗೆ ತೊಂದರೆ ಆಗಬಾರದು. ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನಿನ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. 84ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಚಟುವಟಿಕೆ ಆಗಬೇಕು. ಜೂನ್‌ನಲ್ಲಿ ಎಲ್ಲ ಕಡೆ ಬಿತ್ತನೆ ಶುರು ಆಗುತ್ತದೆ. ಅದನ್ನು ನಿಭಾಯಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಲುಷಿತ ನೀರು ಪೂರೈಕೆ ಆಗದಂತೆ ಎಚ್ಚರ ವಹಿಸಬೇಕು. ನನ್ನ ಕ್ಷೇತ್ರ ತಗಡೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆ. ಸಾಲುಂಡಿ ಗ್ರಾಮದಲ್ಲಿ ಈಗಾಗಲೇ ಕಾಲರಾದಿಂದ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಎಲ್ಲ ಕುಡಿಯುವ ನೀರನ್ನ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.