ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣ ಮತ್ತು ಹಲವಾರು ಆಸ್ಪತ್ರೆಗಳಿಗೆ (hospital) ಭಾನುವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಸಂದೇಶ ಬಂದಿದೆ. ಇದರಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾದರು. ಅಧಿಕಾರಿಗಳು ಬಹು ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ, ವಾಹನಗಳನ್ನು ನಿಯೋಜಿಸಿದರು.
ಬಾಂಬ್ ಬೆದರಿಕೆಯ ಬಗ್ಗೆ ಬುರಾರಿ ಆಸ್ಪತ್ರೆಗೆ ಇ-ಮೇಲ್ ಬಂದಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು, ಬಾಂಬ್ ಸ್ಕ್ವಾಡ್, ಶ್ವಾನ ದಳಗಳು ಸ್ಥಳಕ್ಕೆ ಧಾವಿಸಿತ್ತು. ತಂಡಗಳು ಆಸ್ಪತ್ರೆಯನ್ನು ಪರಿಶೀಲಿಸುತ್ತಿವೆ. ಇನ್ನೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎಂ.ಕೆ. ಮೀನಾ ತಿಳಿಸಿದ್ದಾರೆ.
ಸಂಜೆ 4.26ರ ಸುಮಾರಿಗೆ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಿಂದ ಎರಡನೇ ಕರೆ ಬಂದಿದ್ದು, ಬಳಿಕ ಹಿಂದೂ ರಾವ್ ಆಸ್ಪತ್ರೆ ಸೇರಿದಂತೆ ಎಂಟರಿಂದ 10 ಇತರ ಆಸ್ಪತ್ರೆಗಳಿಗೆ ಇದೇ ರೀತಿಯ ಬೆದರಿಕೆ ಇ-ಮೇಲ್‌ಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಕುರಿತು ಸಂಜೆ 6.15 ರ ಸುಮಾರಿಗೆ ಕರೆ ಬಂದಿತ್ತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರು, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಇದೇ ರೀತಿಯ ಬೆದರಿಕೆಗಳನ್ನು ಹಾಕಲಾಗಿತ್ತು.
ದೂರು ದಾಖಲು
ಇ-ಮೇಲ್‌ಗಳ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಇಂಟರ್‌ಪೋಲ್ ಮೂಲಕ ರಷ್ಯಾದ ಮೇಲಿಂಗ್ ಸೇವಾ ಕಂಪೆನಿ Mail.ru ಅನ್ನು ಸಂಪರ್ಕಿಸಿದರು. ಬಾಂಬ್ ಹುಸಿ ಇ-ಮೇಲ್‌ಗಳ ಉದ್ದೇಶವು ಸಾಮೂಹಿಕ ಭೀತಿಯನ್ನು ಸೃಷ್ಟಿಸುವುದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಾಗಿದೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ, ಸಿಸಿಟಿವಿ ಕೆಮರಾ ಮತ್ತು ಇಮೇಲ್‌ಗಳ ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವಾಲಯ ಒತ್ತಿಹೇಳಿದೆ.