ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ತಾಲೂಕಿನ ಹಾರುತಿ ಹಡಗಿಲ ಕ್ರಾಸ್ ಬಳಿ ಕಬ್ಬು ತುಂಬಿದ ಲಾರಿಯೊಂದು ಕುರಿಗಳು ಮೇಲೆ ಹರಿದ ಪರಿಣಾಮ ಹಲವಾರು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾರುತಿ ಹಡಗಿಲ ಗ್ರಾಮದ ನಿವಾಸಿ ಮಲ್ಲಪ್ಪ ಪೂಜಾರಿ ಅವರಿಗೆ ಸೇರಿದ ಕುರಿಗಳು ಇವಾಗಿದ್ದು, ಎಂದಿನಂತೆ ರಸ್ತೆ ಬದಿಯಲ್ಲಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಲಬುರಗಿಯಿಂದ ಅಫಜಲಪುರ ಕಡೆಗೆ ಅತಿವೇಗವಾಗಿ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಸಾಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಹರಿದಿದೆ.
ಇದನ್ನೂ ಓದಿ:
ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಮಲ್ಲಪ್ಪ ಪೂಜಾರಿ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ತನಿಖೆ ಮುಂದುವರೆದಿದೆ.



