February 19, 2026
Thursday, February 19, 2026
spot_img

ಅಳಿವಿನಂಚಿನ ಗೊಂಬೆಯಾಟಕ್ಕೆ‌ ಮರುಜೀವ: ಗಣ್ಯರೆಡೆಗೆ ಸಾಗಲು ಸಜ್ಜಾಗುತ್ತಿವೆ ಗೊಂಬೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಅಳಿವಿನಂಚಿನತ್ತ ಸಾಗುತ್ತಿರುವ ಯಕ್ಷಗಾನ‌ ಬೊಂಬೆಯಾಟಕ್ಕೆ ಮರುಜೀವ ನೀಡಲು ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಮುಂದಾಗಿದೆ.

ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ “ಗಣ್ಯರೆಡೆಗೆ ಬೊಂಬೆ ನಡಿಗೆ” ಅಭಿಯಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಈ ಬಗ್ಗೆ ಮಂಗಳೂರಿನ ಹೊರವಲಯ ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ‌ ನೀಡಿದ ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್, ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಅಭಿಯಾನ ಪರಿಕಲ್ಪನೆಗೆ ಇದೇ ಫೆಬ್ರವರಿ 2ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಮುಂಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನವನ್ನು ಕೂಡಾ ಆಯೋಜಿಸಲಾಗಿದೆ ಎಂದರು.

ಇದೇ ಸಂದರ್ಭ ಅವರು ಸಂಘದ ಈ ಅಭಿಯಾನದ ಹಿಂದಿನ ದೊಡ್ಡ ಕನಸುಗಳನ್ನು ಕೂಡಾ ಬಿಚ್ಚಿಟ್ಟರು.

2030ರ ಸುವರ್ಣ ಮಹೋತ್ಸವದ ನೆನಪಿಗಾಗಿ ಕಾಸರಗೋಡಿನ ‘ಬೊಂಬೆಮನೆ’ಯಲ್ಲಿ ಬೃಹತ್ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಅಲ್ಲಿ ಸಾವಿರಾರು ಬೊಂಬೆಗಳ ಲೋಕ ಅನಾವರಣಗೊಳ್ಳಲಿದೆ.

ಈಗಾಗಲೇ 100ಕ್ಕೂ ಹೆಚ್ಚು ಶಿಷ್ಯರಿಗೆ ತರಬೇತಿ ನೀಡಿ, ಕಲೆಯ ವಾರಸುದಾರರನ್ನು ಸಜ್ಜುಗೊಳಿಸಲಾಗಿದೆ.

‘ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ’ ಮೂಲಕ ಸಾವಿರಾರು ವಿದ್ಯಾರ್ಥಿಗಳಲ್ಲಿ ಈ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸಲಾಗಿದೆ.

ತೆಂಕುತಿಟ್ಟು ಶೈಲಿಯ ಈ ಬೊಂಬೆಯಾಟ ಕೇವಲ ಕರಾವಳಿಗಷ್ಟೇ ಸೀಮಿತವಾಗಿಲ್ಲ, ದೇಶ-ವಿದೇಶಗಳಲ್ಲಿ ಪ್ರದರ್ಶನ ಕಂಡು ಅಂತರಾಷ್ಟ್ರೀಯ ಗೌರವಗಳನ್ನು ಮುಡಿಗೇರಿಸಿಕೊಂಡಿದೆ.

ಗಣ್ಯರೆಡೆಗೆ ಬೊಂಬೆ ನಡಿಗೆ” ಅಭಿಯಾನ

ಇದು ಕೇವಲ ಮನರಂಜನೆಯಲ್ಲ, ನಮ್ಮ ಮಣ್ಣಿನ ಸಂಸ್ಕೃತಿಯ ಉಸಿರು. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವುದೇ ನಮ್ಮ ಗುರಿ ಎಂದು ಕೆ.ವಿ. ರಮೇಶ್ ಹೇಳಿದರು.

ಇದೇ ಸಂದರ್ಭ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಬೊಂಬೆಯಾಟದ ಪ್ರಾತ್ಯಕ್ಷಿಕೆಯು ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಇದನ್ನೂ ಓದಿ:

ಸಂಘಟಕರು ಉಳ್ಳಾಲ ತಾಲೂಕು ಘಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ “ಗಣ್ಯರೆಡೆಗೆ ಬೊಂಬೆ ನಡಿಗೆ” ಪರಿಕಲ್ಪನೆಯ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಉಳಿಯತಡ್ಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು,ಕಾಸರಗೋಡು ಜಿಲ್ಲಾ ಕನ್ನಡ ಜಾಗೃತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು,ಎಸ್.ಎಲ್. ಭಾರದ್ವಾಜ್ ಹಾಗೂ ಅಚಲ್ ಭಟ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !