ಹೈದರಾಬಾದ್‌ ನಲ್ಲಿ ಮಸೀದಿ ನೆಲಸಮ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಹೈದರಾಬಾದ್‌ನ ಹೊರವಲಯದಲ್ಲಿರುವ ಶಂಶಾಬಾದ್‌ನಲ್ಲಿ ಮುನ್ಸಿಪಲ್ ಅಧಿಕಾರಿಗಳು ಮಸೀದಿ ಕೆಡವಿದ್ದು, ಮುಸ್ಲಿಮರ ಪ್ರತಿಭಟನೆಗೆ ಕಾರಣವಾಗಿದೆ.
ಗ್ರೀನ್ ಅವೆನ್ಯೂ ಕಾಲೋನಿಯಲ್ಲಿರುವ ಮಸೀದಿ-ಎ-ಖಾಜಾ ಮಹಮೂದ್ ಅನ್ನು ಮುಂಜಾನೆ ನಗರಪಾಲಿಕೆ ಸಿಬ್ಬಂದಿ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ನೆಲಸಮಗೊಳಿಸಿದರು.
ಈ ಘಟನೆಯು ಸ್ಥಳೀಯ ಮುಸ್ಲಿಂ ನಿವಾಸಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರ ತೀವ್ರ ಪ್ರತಿಭಟನೆಗೆ ಕಾರಣವಾಯಿತು.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ನಾಯಕರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಮೂರು ವರ್ಷಗಳ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿದ್ದು, ಶುಕ್ರವಾರದ ಪ್ರಾರ್ಥನೆ ಸೇರಿದಂತೆ ಪ್ರತಿದಿನ ಐದು ಬಾರಿ ನಮಾಜ್‌ಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ ಎಂದು ಎಂಬಿಟಿ ನಾಯಕ ಅಮ್ಜೆದುಲ್ಲಾ ಖಾನ್ ಹೇಳಿದರು.
ಮಸೀದಿಯ ಪಕ್ಕದಲ್ಲಿ ಮನೆ ಹೊಂದಿರುವ ವ್ಯಕ್ತಿಯೊಬ್ಬರು, ಅಲ್ಲಿ ಮಸೀದಿ ನಿರ್ಮಿಸಿದ್ದರ ವಿರುದ್ಧ ಶಂಶಾದ್ ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪುರಸಭೆ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಕಟ್ಟಡ ಕೆಡವಲು ಮುಂದಾಗಿದ್ದಾರೆ ಎಂದು ಎಂಬಿಟಿ, ಎಐಎಂಐಎಂನ ಸ್ಥಳೀಯ ಮುಖಂಡರು ಪುರಸಭೆ ಕಚೇರಿಯ ಮುಂದೆ ಧರಣಿ ನಡೆಸಿದರು. ಮಸೀದಿ ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರ ಬಿಜೆಪಿಯ ಯೋಗಿ ಸರ್ಕಾರದ ಹಾದಿಯಲ್ಲೇ ಸಾಗುತ್ತಿದೆ ಎಂದು ಎಂಬಿಟಿ ನಾಯಕ ಖಾನ್ ಟೀಕಿಸಿದ್ದಾರೆ. 2014ರಲ್ಲಿ ಟಿಆರ್‌ಎಸ್‌ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ತೆಲಂಗಾಣದಲ್ಲಿ ಆರು ಮಸೀದಿಗಳನ್ನು ಕೆಡವಲಾಗಿದೆ. ಕೆಸಿಆರ್ ಅವರನ್ನು ಜಾತ್ಯತೀತ ನಾಯಕ ಎಂದು ಹೇಳುವ ಮುಸ್ಲಿಂ ಸಂಘಟನೆಗಳು ಮತ್ತು ರಾಜಕಾರಣಿಗಳ ಕುರಿತು ಅವರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!