ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 13 ಬರ್ಷಗಳ ಬಳಿಕ ‘ಎನ್ಕೌಂಟರ್’ ಸದ್ದು ಮಾಡಿದ್ದು, ಎಎನ್ ಎಫ್ ಮತ್ತು ನಕ್ಸಲರ ನಡುವಿನ ಮುಖಾಮುಖಿಯಲ್ಲಿ ಗುಂಡೇಟಿಗೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಈ ಭಾಗದಲ್ಲಿ ನಕ್ಸಲರು ಆಹಾರ ಸಾಮಾಗ್ರಿ ಖರೀದಿಗೆ ಬಂದಿದ್ದರು. ಈ ವೇಳೆ ಎಎನ್ ಎಫ್ ಸಿಬ್ಬಂದಿ ಅಲಟ್೯ ಆಗಿದ್ದು, ಈ ವೇಳೆ ಎನ್ಕೌಂಟರ್ ನಡೆದಿದೆ. ವಿಕ್ರಮ್ ಜೊತೆಗಿದ್ದವರು ಪರಾರಿಯಾಗಿದ್ದಾರೆ. ವಿಕ್ರಮ್ ಸಾವನ್ನಪ್ಪಿದ್ದಾನೆ.
ಕಾರ್ಯಾಚರಣೆ ಚುರುಕಾಗಿತ್ತು
ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ದಟ್ಟಾರಣ್ಯದಲ್ಲಿ, ಅರಣ್ಯದಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಸುಳಿವಿನ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿತ್ತು.
ಮೋಸ್ಟ್ ವಾಂಟೆಡ್ ಲಿಸ್ಟ್
ನಕ್ಸಲ್ ನಾಯಕ ವಿಕ್ರಂ ಗೌಡ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಇದ್ದ. ಕೇವಲ ಕರ್ನಾಟಕ ಮಾತ್ರವಲ್ಲ ಆತನಿಗಾಗಿ ನೆರೆಯ ಕೇರಳ ಹಾಗೂ ತಮಿಳುನಾಡು ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯಿಂದ ಹುಡುಕಾಟ ನಡೆಸಲಾಗುತ್ತಿತ್ತು. ನಕ್ಸಲ್ ಚುಟುವಟಿಕೆಗಳಲ್ಲಿ ಭಾಗವಹಿಸಿದ್ದ ಆರೋಪ ಹಾಗೂ ಅದರ ಮುಂದಾಳತ್ವ ವಹಿಸಿದ್ದ ಆರೋಪವೂ ಈತನ ಮೇಲಿದೆ. ಇದೀಗ ಎನ್ಕೌಂಟರ್ ನಲ್ಲಿ ಈತನನ್ನು ಹೊಡೆದುರುಳಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.