ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವತಿಯೊಬ್ಬಳು ತನ್ನ ನಾಲ್ಕೂವರೆ ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ
ಉಸಿರುಗಟ್ಟಿಸಿ ಕೊಲೆಗೈದು ತಾನೂ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಂಗಳೂರು ನಗರದ ಗುಜ್ಜರಕೆರೆ ಬಳಿಯ ಆಪಾರ್ಟ್‌ಮೆಂಟ್ ಒಂದರಲ್ಲಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಫಾತಿಮಾ ರುಕಿಯಾ(23)ಎಂದು ಗುರುತಿಸಲಾಗಿದೆ.
ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ಮದುವೆಯಾಗಿದ್ದ ರುಕಿಯಾ ಅವರು ಜು.7ರಂದು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈಕೆಗೆ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಹೇಳುತ್ತಿದ್ದು, ಮಾನಸಿಕವಾಗಿ ನೊಂದಿದ್ದರು ಎಂದು ಫಾತಿಮಾರ ತಾಯಿ ಖತಿಜಾತುಲ್ ಕುಬ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ಪೂರ್ವಾಹ್ನ ಬೆಳಗ್ಗೆ ಸುಮಾರು 11 ಗಂಟೆಯಿಂದ 1.30ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವನ್ನು ನೀರಿದ್ದ ಟಬ್‌ನಲ್ಲಿ ಮುಳುಗಿಸಿ ಕೊಲೆಗೈದು ಬಳಿಕ ರುಕಿಯಾ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.