ಹೊಸದಿಗಂತ ವರದಿ ಮಡಿಕೇರಿ:
ದಾರಿ ತಪ್ಪಿ ಬಂದ ಮರಿ ಆನೆಯೊಂದು ನಿರ್ಮಾಣ ಹಂತದಲ್ಲಿದ್ದ ಇಂಗು ಗುಂಡಿಗೆ ಬಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಒದ್ದಾಡಿದ ಘಟನೆ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯ ನಲ್ವತ್ತೆಕರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ 7.30ರ ವೇಳೆಗೆ ಆಹಾರ ಅರಸಿ ಬಂದ ಮರಿಯಾನೆ, ಗ್ರಾಮದ ಮಣಿ ಎಂಬವರ ಮನೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಇಂಗು ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದೆ. ಗುಂಡಿ ತುಂಬಾ ಆಳವಾಗಿದ್ದರಿಂದ ಮರಿಯಾನೆ ಹೊರಗೆ ಬರಲು ಪರದಾಡಿದೆ. ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲೇ ಮರಿಯಾನೆಯ ಜೊತೆಗಿದ್ದ ತಾಯಿ ಆನೆ ಸ್ಥಳಕ್ಕೆ ಆಗಮಿಸಿ ಮರಿಯನ್ನು ಮೇಲಕ್ಕೆತ್ತಲು ಸಹಾಯ ಮಾಡಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ತಾಯಿ ಆನೆಯ ಸಹಾಯದಿಂದ ಮರಿಯಾನೆ ಗುಂಡಿಯಿಂದ ಹೊರಗೆ ಬಂದಿದೆ. ಬಳಿಕ ಮರಿ ಆನೆ ತನ್ನ ಗುಂಪಿನೊಂದಿಗೆ ಕಾಡಿನತ್ತ ಸುರಕ್ಷಿತವಾಗಿ ಸಾಗಿದೆ. ಈ ಘಟನೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



