July 29, 2026
Wednesday, July 29, 2026
spot_img

ಕಸದಬುಟ್ಟಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಅಮ್ಮ: ಕುರಿಗಾಹಿಯಿಂದ ಕಂದನ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿಯಲ್ಲಿ ನವಜಾತು ಶಿಶುವನ್ನು ಕಸದ ತೊಟ್ಟಿಗೆ ಎಸೆದು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದ ಬಳಿಯ ನರಗುಂದಕ್ಕೆ ಹೋಗುವ ರಸ್ತೆಯಲ್ಲಿರುವ ಬಸವಣಕಟ್ಟೆ ಸೇತುವೆ ಕೆಳಗೆ ಗಂಡುಮಗುವನ್ನು ಬಿಟ್ಟು ಹೋಗಲಾಗಿತ್ತು. ಮಗು ಅಳುವ ಶಬ್ದ ಕೇಳಿದ ಕುರಿಗಾಹಿಯೊಬ್ಬರು ಕಂದನನ್ನು ರಕ್ಷಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ, ಮೊದಲು ಚಿಕಿತ್ಸೆಗಾಗಿ ಸವದತ್ತಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಲ್ಲಿಯೇ ಮಗು ಆರೈಕೆ ಪಡೆಯುತ್ತಿದ್ದು, ಆರೋಗ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಹಿತಿ ಗೊತ್ತಾಗುತ್ತಿದ್ದಂತೆ ಸುರೇಬಾನ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ತಾಯಿಯ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಪಕ್ಕದ ಕಿತ್ತೂರು, ಕುರಿಗೋವಿನಕೊಪ್ಪದಲ್ಲಿ ವಿಚಾರಣೆ ಕೈಗೊಂಡಿದ್ದಾರೆ. ಮಕ್ಕಳನ್ನು ಸಾಕಲು ಆಗೋದಿಲ್ಲ ಎಂದರೆ ಯಾಕೆ ಹೆರಬೇಕು? ಈ ರೀತಿ ನಿರ್ಜನ ಪ್ರದೇಶದ ಕಸದ ಬುಟ್ಟಿಯಲ್ಲಿ ಕಂದನನ್ನು ಬಿಟ್ಟು ಹೋದ ಪೋಷಕರಿಗೆ ಸ್ವಲ್ಪವೂ ಪಶ್ಚಾತ್ತಾಪವೇ ಇಲ್ಲವೇ ಎಂದು ಕುರಿಗಾಹಿ ಬೇಸರಿಸಿಕೊಂಡಿದ್ದಾರೆ.

ತಾಯಿ ಹುಡುಕಾಟದ ವೇಳೆ ಸುರೇಬಾನದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಸುರೇಬಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !