ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡನಿಗೆ ಮಗು ಸಿಗಬಾರದೆಂದು ತಾಯಿಯೇ ಮಗುವನ್ನು ಕೊಂದ ಪ್ರಕರಣ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಇಂದು ರಾಜಾಜಿನಗರದ ಅಪಾರ್ಟ್‌ಮೆಂಟ್‌ನಲ್ಲಿ ಮಗುವಿನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಪ್ರಕರಣ ಏನು?
ಬೆಂಗಳೂರಿನ ಸ್ಟಾರ್ಟ್‌ಅಪ್ ಒಂದರ ಸಿಇಒ ಸುಚನಾ ಸೇಠ್ ಹಾಗೂ ಪತಿ ವೆಂಕಟರಮಣ ವಿಚ್ಛೇದಿತರು. ಕೋರ್ಟ್ ಹೇಳಿದಂತೆ ತಂದೆಯ ಜೊತೆ ಸಮಯ ಕಳೆಯಲು ವಾರದಲ್ಲಿ ಒಂದು ದಿನ ಅವಕಾಶ ನೀಡುವುದು ಕೂಡ ಸುಚನಾಗೆ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ಮಗುವನ್ನು ಕೊಂದಿದ್ದಾರೆ ಎಂದು ಪೊಲೀಸರು ಊಹಿಸಿದ್ದಾರೆ.
ಹೊಟೇಲ್‌ವೊಂದರಲ್ಲಿ ಸುಚನಾ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಮೃತದೇಹ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಇಂಡೋನೇಷ್ಯಾದಲ್ಲಿರುವ ವೆಂಟಕರಮಣ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹೊಟೇಲ್‌ಗೆ ತೆರಳುವ ವೇಳೆ ಮಗು ಜೊತೆ ಹೋಗಿದ್ದ ಸುಚನಾ ವಾಪಾಸ್ ಆಗುವ ವೇಳೆ ಸೂಟ್‌ಕೇಸ್ ಜೊತೆ ಹಿಂದಿರುಗಿದ್ದರು.
ಹೊಟೇಲ್ ರೂಂ ಕ್ಲೀನ್ ಮಾಡುವ ವೇಳೆ ರಕ್ತದ ಕಲೆಗಳು ಕಾಣಿಸಿತ್ತು. ತಕ್ಷಣವೇ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಕೆ ತೆರಳುತ್ತಿದ್ದ ಟ್ಯಾಕ್ಸಿ ಹೊಟೇಲ್‌ನವರೇ ಬುಕ್ ಮಾಡಿದ್ದರು. ಹೀಗಾಗಿ ಪೊಲೀಸರು ಟ್ಯಾಕ್ಸಿ ಡ್ರೈವರ್‌ನ್ನು ಸಂಪರ್ಕಿಸಿ ಆಕೆಯನ್ನು ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದರು. ಅಂತೆಯೇ ಪೊಲೀಸರು ಸೂಟ್‌ಕೇಸ್ ತೆಗೆದ ವೇಳೆ ಮಗುವಿನ ಮೃತದೇಹ ಪತ್ತೆಯಾಗಿತ್ತು.