ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಿಯ ರೀತಿಯಲ್ಲಿ ದರೋಡೆಕೋರರ ಗುಂಪೊಂದು ತನಿಷ್ಕಾ ಶೋರೂಂಗೆ ನುಗ್ಗಿ ಸಿಬ್ಬಂದಿ ಹಾಗೂ ಗ್ರಾಹಕರನ್ನು ಗನ್ ಪಾಯಿಂಟ್ನಲ್ಲಿಟ್ಟು 25 ಲಕ್ಷದ ಚಿನ್ನಾಭರವಣವನ್ನು ದೋಚಿ ಪರಾರಿಯಾಗಿದ್ದಾರೆ.
ಬಿಹಾರದಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗನ್ ಹಿಡಿದು ತನಿಷ್ಕ್ ಜ್ಯುವೆಲ್ಲರಿಗೆ ನುಗ್ಗಿದ ದರೋಡೆಕೋರರು ಗನ್ ತೋರಿಸಿಯೇ ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳಿ ಒಳ ನುಗ್ಗಿದ್ದು, ಬಳಿಕ ಶಾಪ್‌ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಃಕರನ್ನು ಒತ್ತೆಯಾಳಾಗಿರಿಸಿಕೊಂಡು ಕೈಗೆ ಸಿಕ್ಕಿದ್ದೆಲ್ಲವನ್ನೂ ದೋಚಿ ಆಭರಣದೊಂದಿಗೆ ಪರಾರಿಯಾಗಿದ್ದಾರೆ.
ಈ ಭಯಾನಕ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಮುಂಜಾನೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವಂತೆ ಮಾಸ್ಕ್ ಧರಿಸಿ ಕೈಯಲ್ಲಿ ಗನ್ ಹಿಡಿದು ಶೋ ರೂಂಗೆ ನುಗ್ಗಿದ ದರೋಡೆಕೋರರು, ಗ್ರಾಹಕರು ಮತ್ತು ಉದ್ಯೋಗಿಗಳನ್ನು ಕೈ ಮೇಲೆತ್ತಿ ಶರಣಾಗುವಂತೆ ಹೇಳಿದ್ದಾರೆ. ಕದಲಿದಲ್ಲಿ ಗುಂಡು ಹಾರಿಸುವುದಾಗಿ ಬೆದರಿಸಿದ್ದಾರೆ.
ತನಿಷ್ಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಎಂಬುವವರಿಂದ ಬಂದೂಕು ಕಸಿದ ದರೋಡೆಕೋರರು, ಜ್ಯುವೆಲ್ಲರಿ ಶಾಪ್‌ನಲ್ಲಿ ಆಭರಣ ಇಡುವಂತಹ ರ್ಯಾಕ್‌ಗಳ ಬಳಿ ಹೋಗಿ ಕೈಗೆ ಸಿಕ್ಕಿದ್ದೆಲ್ಲವನ್ನು ದೋಚಿದ್ದಾರೆ.
ಮೊದಲೇ ಯೋಜನೆ ರೂಪಿಸಿ ಈ ದರೋಡೆ ಮಾಡಿದ್ದು, ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯುದ್ಧಕ್ಕೂ ಕಾರುಗಳನ್ನು ನಿಲ್ಲಿಸಿ ಈ ಗ್ರೇಟ್ ರಾಬರಿ ಮಾಡಿದ್ದಾರೆ. ಅಂಗಡಿಯೊಳಗೆ ಪ್ರವೇಶಿಸಿ ಲಕ್ಷಾಂತರ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಪರಿಸ್ಥಿತಿ ಉದ್ವಿಗ್ನತೆಯ ಸ್ವರೂಪಕ್ಕೆ ತಿರುಗಿದಾಗ ಸಿಬ್ಬಂದಿ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕೌಂಟರ್‌ಗಳ ಹಿಂದೆ ಅಡಗಿಕೊಂಡರು ಎಂದು ಲೂಟಿಯಾದ ಆಭರಣ ಅಂಗಡಿಯ ಉದ್ಯೋಗಿ ರೋಹಿತ್ ಕುಮಾರ್ ಮಿಶ್ರಾ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
20-30 ಬಾರಿ ಕರೆ ಮಾಡಿದರು ಕರೆ ಎತ್ತದ ಪೊಲೀಸರು
ದರೋಡೆ ವೇಳೆ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಪದೇ ಪದೇ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದರು. ಕೇವಲ 600 ಮೀಟರ್ ದೂರದಲ್ಲಿರುವ ಹತ್ತಿರದ ಪೊಲೀಸ್ ಠಾಣೆಗೆ ಪದೇ ಪದೇ ಕರೆ ಮಾಡಿದರು. ಆದರೆ 25-30 ಬಾರಿ ತುರ್ತು ಕರೆಗಳನ್ನು ಮಾಡಿದರೂ, ಯಾವುದೇ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ, ಇದರಿಂದಾಗಿ ದರೋಡೆಕೋರರು ಸಿಕ್ಕಿಬೀಳದೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.